ಶ್ರೀನಿವಾಸಪುರ: ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಚಲ್ದಿಗಾನಹಳ್ಳಿಯಿಂದ ಶ್ರೀನಿವಾಸಪುರದ ತಾಲ್ಲೂಕು ಕಚೇರಿಗೆ ಕಾಲ್ನಡಿಗೆ ಜಾಥಾ ಏರ್ಪಡಿಸಲಾಗಿತ್ತು.
ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸರ್ಕಾರ ಮತ್ತು ಸಮಾಜ ದಲಿತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಪ್ರತಿಭಾವಂತ ವಿದ್ಯಾರ್ಥಿ ರಾಕೇಶ್ ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಲಿತ ಸಮುದಾಯ ಪ್ರತಿಭಟನೆ ಹಾದಿ ಹಿಡಿಯದೆ ವಿಧಿಯಿಲ್ಲ ಎಂದು ಹೇಳಿದರು.
ಯಾವುದೇ ಚಳವಳಿಯಲ್ಲಿ ಬರಹಗಾರರು ಹಾಗೂ ಕಲಾವಿದರು ಮುಂಚೂಣಿಯಲ್ಲಿರಬೇಕು. ಆದರೆ ಈಗ ಅವರನ್ನು ಹಿಂದಕ್ಕೆ ತಳ್ಳಲಾಗಿದೆ. ಹೊಸ ಹಾಡುಗಳ ಮೂಲಕ ಸಾಮಾಜಿಕ ಜಾಗೃತಿ ಉಂಟುಮಾಡಬೇಕು. ರಾಕೇಶನ ಸಾವಿಗೆ ನ್ಯಾಯ ದೊರೆಯಬೇಕು ಎಂದು ಹೇಳಿದರು.
ದಲಿತ ಮುಖಂಡ ಚಿಂತಾಮಣಿ ಎನ್.ವೆಂಕಟೇಶ್ ಮಾತನಾಡಿ, ಪೊಲೀಸರು ರಾಕೇಶ್ ಕೊಲೆ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಈ ವಿಷಯದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಹಾಸನದ ದಲಿತ ಮುಖಂಡ ಶ್ರೀಧರ್ ಕಲ್ವೀರಣ್ಣ ಮಾತನಾಡಿ, ರಾಕೇಶ್ ಕೊಲೆಯನ್ನು ಕಠಿಣ ಪದಗಳಿಂದ ಖಂಡಿಸಬೇಕು. ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕು. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಜನರನ್ನು ಸುಮ್ಮನೆ ಬಿಡಬಾರದು. ಸರ್ಕಾರ ರಾಕೇಶ್ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ವೀರಭದ್ರಸ್ವಾಮಿ, ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ, ಮಧು ಹೊಲೆಯಾರ್, ಸಿದ್ಧಾರ್ಥ ರಾಕೇಶ್ ಕೊಲೆ ಕಂಡಿಸಿ ಮಾತನಾಡಿದರು.
ವಿವಿಧ ದಲಿತ ಸಂಘಟನೆಗಳ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿದರು. ಮುಖಂಡರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ನೀಡಿದರು.
ದಲಿತ ಮುಖಂಡ ವರ್ತನಹಳ್ಳಿ ವೆಂಕಟೇಶ್, ಸೂಲಿಕುಂಟೆ ರಮೇಶ್, ಗಡ್ಡಂ ಎನ್.ವೆಂಕಟೇಶ್, ಹೆಬ್ಬಾಳ ವೆಂಕಟೇಶ್, ಬಸವರಾಜ್, ವಿಜಯಕುಮಾರ್, ಆನಂದ್ ಬಂಡಾರಿ, ಪ್ರಭಾಕರಗೌಡ, ಪದ್ಮಾವತಮ್ಮ, ರಾಮಾಂಜಮ್ಮ, ಹಾರೋಹಳ್ಳಿ ರವಿ, ರಾಧಮ್ಮ, ನರಸಿಂಹಪ್ಪ, ಬೈಚೇಗೌಡ, ನವೀನ್, ಹುಂಜ ಮುನಿರೆಡ್ಡಿ, ನಾರಾಯಣಸ್ವಾಮಿ ಇದ್ದರು.