ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಂಗಡಿ ನಡೆಸುವ ವ್ಯಾಪಾರಿಗಳು ಕಡ್ಡಾಯವಾಗಿ ಅಗತ್ಯ ಶುಲ್ಕ ಪಾವತಿಸಿ ಪರವಾನಗಿ ಪಡೆದುಕೊಳ್ಳಬೇಕು ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಅಂಗಡಿ ಮಾಲೀಕರು ವ್ಯಾಪಾರ ನಡೆಸಲು ಪರವಾನಗಿ ಹೊಂದಿರುವ ಬಗ್ಗೆ ತಪಾಸಣೆ ನಡೆಸಿದ ಬಳಿಕ ಮಾತನಾಡಿ, ಪುರಸಭೆಯಿಂದ ಪರವಾನಗಿ ಪಡೆಯದೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಂಗಡಿ ಪರವಾನಗಿ ಪಡೆಯದ ಅಂಗಡಿಗಳಿಂದ ಪೌರ ಕಾರ್ಮಿಕರು ಕಸ ಪಡೆಯುವುದಿಲ್ಲ. ಪುರಸಭೆ ಒದಗಿಸುವ ಯಾವುದೇ ಸೇವೆ ಪಡೆಯಬೇಕಾದರೆ, ಕಾನೂನು ರೀತ್ಯಾ ನಡೆದುಕೊಳ್ಳಬೇಕು. ಪೌರ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ತಪಾಸಣಾ ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಭಾಗವಹಿಸಿದ್ದರು.