ಕೋಲಾರ ಡಿಸಿಸಿ ಬ್ಯಾಂಕ್ ವಿರುದ್ದ ನಿರಾಧಾರವಾದ ಆರೋಪ ಮಾಡುವುದನ್ನು ಬಿಡಿ:ಜಾತಿ,ಧರ್ಮ,ಪಕ್ಷ ಕೇಳಿ ಯಾರಿಗಾದರೂ ಸಾಲ ನೀಡಿದ್ದರೆ ತಿಳಿಸಿ-ಅನಿಲ್ ಕುಮಾರ್ ಸವಾಲು

ಕೋಲಾರ:- ಡಿಸಿಸಿ ಬ್ಯಾಂಕ್ ವಿರುದ್ದ ದಿನನಿತ್ಯ ಆರೋಪಗಳು ಕೇಳಿಬರುತ್ತಿವೆ, ಸಾಲಕ್ಕೆ ಬಂದ ಯಾರನ್ನಾದರೂ ನಿಮ್ಮ ಜಾತಿ,ಪಕ್ಷ,ಧರ್ಮ ಯಾವುದೆಂದು ಕೇಳಿದ ನಿದರ್ಶನವಿದ್ದರೆ ಕೂಡಲೇ ತಿಳಿಸಲಿ, ನಿಯಮಾನುಸಾರ ಸಾಲ ಕೇಳಿ ಬಂದ ಯಾರಿಗಾದರೂ ಸಾಲ ನೀಡಿಲ್ಲ ಎಂಬ ದೂರುಗಳಿದ್ದರೆ ತಿಳಿಸಿ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಸವಾಲು ಹಾಕಿದರು.
ತಾಲೂಕಿನ ವಕ್ಕಲೇರಿಯಲ್ಲಿ ಸೋಮವಾರ ರೇಷ್ಮೆ ಬೆಳಗಾರರ ರೈತರ ಸೇವಾ ಸಹಕಾರ ಸಂಘದಿಂದ ರೈತ ಭವನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ರೈತರಿಗೆ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡಿ, ಬ್ಯಾಂಕ್ ಬಗ್ಗೆ ಟೀಕೆ ಮಾಡುವ ಮಹಾನುಭಾವರು ಯಾರೇ ಆಗಲಿನಿರಾಧಾರವಾದ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಬೇಡಿ ಎಂದು ಕಿವಿಮಾತು ಹೇಳಿದರು.
ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ರೈತರ ಸ್ತ್ರೀ ಶಕ್ತಿ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ನಮ್ಮ ಕೆಲಸ ಪಾರದರ್ಶನ ಹಾಗೂ ಪ್ರಾಮಾಣಿಕವಾಗಿವೆ ಇಂತಹ ಸಂದರ್ಭದಲ್ಲಿ ಎದುರಾಗುವ ನಿರಾಧಾರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುತ್ತಿದ್ದೇವೆ ಎಂದರು.
ನರ್ಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‍ನಿಂದ ಸಾಲ ಕೊಡತ್ತಾರೆ ಅಷ್ಟೇ ನಮಗೆ ಯಾವುದೇ ಅನುದಾನ ಅಲ್ಲ, ಆರೋಪ ಮಾಡುವವರು ಮೊದಲು ಅದನ್ನು ಅರ್ಥಮಾಡಿಕೊಳ್ಳಬೇಕು ಈ ಸೊಸೈಟಿ ಬೆಳವಣಿಗೆಗೆ ರೈತ ಭವನ ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಪೂರಕವಾಗಲಿದೆ ಈ ಭವನಕ್ಕೆ ನನ್ನ ಎಂಎಲ್ಸಿ ಅನುದಾನದಲ್ಲಿ 10 ಲಕ್ಷ ರೂ ನೀಡಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ರೈತಭವನಕ್ಕೆ ಮಾಕೊಂಡಪ್ಪ ಹೆಸರಿಡಿ


ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಹಕಾರಿ ಕ್ಷೇತ್ರದಲ್ಲಿ ಅತಿ ದೊಡ್ಡ ಇತಿಹಾಸ ಹೊಂದಿರುವ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘದ ಸದಸ್ಯತ್ವ ನೀಡಬೇಕು, ಈಗ ನಿರ್ಮಿಸುತ್ತಿರುವ ರೈತ ಭವನಕ್ಕೆ ಸೊಸೈಟಿ ಮಾಜಿ ಅಧ್ಯಕ್ಷ ಪ್ರಗತಿಪರ ರೈತ ದಿವಂಗತ ಮಾರ್ಕೊಂಡಪ್ಪ ಅವರ ಹೆಸರು ಇಡುವಂತೆ ಕರೆ ನೀಡಿದರು.
ಪ್ರತಿಯೊಂದು ಸೊಸೈಟಿಯೂ ಒಂದೊಂದು ಬ್ಯಾಂಕಾಗಬೇಕು, ಆರ್ಥಿಕವಾಗಿ ಸಬಲಗೊಳ್ಳಲು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದ ಅವರು, ಕೇವಲ ನಿಮ್ಮ ವಹಿವಾಟು ಪಡಿತರ ವಿತರಣೆಗೆ ಸೀಮಿತವಾಗದೇ ರೈತರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.

ರೈತರಿಗೆ ತಂತ್ರಜ್ಞಾನ ಸಿಗಲಿ-ಡಿ.ದೇವರಾಜ್


ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಮಾತನಾಡಿ, ರೈತರು ಪ್ರಯೋಗಾತ್ಮಕ ಚಟುವಟಿಕೆಗಳ ಮೂಲಕ ಹೊಸ ಹೊಸ ತಳಿಗಳನ್ನು ತಮ್ಮ ತೋಟಗಳಲ್ಲಿ ಬೆಳೆಯುವಂತಹ ಮಾಹಿತಿ ಕೇಂದ್ರವಾಗಿ ವಕ್ಕಲೇರಿ ರೈತ ಭವನ ಕಾರ್ಯನಿರ್ವಹಿಸಲಿ, ರೈತರಿಗೆ ಕೃಷಿಯಲ್ಲಿ ಅಗತ್ಯವಾದ ತಂತ್ರಜ್ಞಾನ ನೀಡುವ ಕೇಂದ್ರವಾಗಲಿ ಎಂದು ಹಾರೈಸಿದರು.
ರೈತರಿಗೆ ಬೆಳೆಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಸಾಲ ಮಾಡಿ ಅದೇ ಟಮೋಟ ಅದೇ ಆಲೂಗಡ್ಡೆಯಂತಹ ಬೆಳೆಗಳನ್ನು ಬೆಳೆಯಲು ಮಾತ್ರ ಸೀಮಿತವಾಗಿದ್ದಾರೆ ಸಾಲದಲ್ಲಿ ಸಿಲುಕಿದ್ದಾರೆ ಬೇರೆ ಬೇರೆ ವಿಭಿನ್ನ ರೀತಿಯ ಮಿಶ್ರ ಬೆಳೆಗಳ ಹಾಗೂ ದೀರ್ಘಕಾಲದ ಬೆಳೆಗಳನ್ನು ಬೆಳೆಯುವ ಮಾಹಿತಿಯನ್ನು ರೈತರಿಗೆ ನೀಡಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಇಂದು ಸಹಕಾರ ರಂಗದ ಶಕ್ತಿಯಾಗಿ ಬೆಳೆದಿದೆ, ಅದೇ ಮಾದರಿಯಲ್ಲಿ ಗ್ರಾಮೀಣ ಸೊಸೈಟಿಗಳನ್ನು ಸದೃಢಗೊಳಿಸುವ ಕಾರ್ಯವೂ ನಡೆದಿದೆ ಎಂದ ಅವರು, ಅವಿಭಜಿತ ಜಿಲ್ಲೆಯಲ್ಲಿ ದಿವಾಳಿಯಾಗಿದ್ದ ಸೊಸೈಟಿಗಳಿಗೆ ಇಂದು ಮರುಜೀವ ಬಂದಿದ್ದು, ಕೋಟಿಗಟ್ಟಲೆ ವಹಿವಾಟು ನಡೆಯುವಂತಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಎಷ್ಟೇ ಸಾಲ ನೀಡಲು ಸಿದ್ದವಿದೆ ಆದರೆ ಅದನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕಿನ ಘನತೆ ಉಳಿಸುವುದರ ಜತೆಗೆ ಮತ್ತಷ್ಟು ಮಹಿಳೆಯರು,ರೈತರಿಗೆ ಸಾಲಸೌಲಭ್ಯ ಸಿಗಲು ಕಾರಣರಾಗಿ, ಠೇವಣಿಯನ್ನು ವಾಣಿಜ್ಯ ಬ್ಯಾಂಕಿನಲ್ಲಿಡದಿರಿ, ನಿಮಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಡಿಸಿಸಿ ಬ್ಯಾಂಕಿನಲ್ಲಿಡಿ ಎಂದು ಮನವಿ ಮಾಡಿದರು.
ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಿಗೌಡ ಮಾತನಾಡಿ, ಸೊಸೈಟಿ ಪ್ರಾರಂಭವಾಗಿ 48 ವರ್ಷವಾಗಿದ್ದು ಸುಮಾರು 14 ಕೋಟಿಗೂ ಹೆಚ್ಚು ಸಾಲವನ್ನು ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿದ್ದು ಹೋಬಳಿ ಕೇಂದ್ರವಾಗಿದ್ದರೂ ದೂರದ ತಾಲೂಕಿನಿಂದ ರೈತರು ಬಂದು ಔಷಧಿ ಹಾಗೂ ಗೊಬ್ಬರ ಕೊಂಡುಕೊಳ್ಳುತ್ತಾರೆ ಆದರೆ ಜಾಗ ಕಡಿಮೆ ಇದ್ದು ಅದಕ್ಕಾಗಿ ವಿವಿಧ ಜನಪ್ರತಿನಿಧಿಗಳ ಸಹಾಯದಿಂದ ರೈತ ಭವನ ನಿರ್ಮಾಣ ಮಾಡುತ್ತೀದ್ದವೆ ಇದಕ್ಕೆ ಎಲ್ಲರೂ ಸಹಕಾರ ಮುಖ್ಯವಾಗಿದೆ ಎಂದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಮದ ಸಹಕಾರ ಸಂಘದ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಕೇವಲ ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿ ಇಂದು 14 ಕೋಟಿ ಸಾಲ ನೀಡಿದೆ ಎಂದರೆ ಅದು ಆಶ್ಚರ್ಯ ತರಿಸುವ ವಿಷಯವಾಗಿದ್ದು, ಇದಕ್ಕೆ ಡಿಸಿಸಿ ಬ್ಯಾಂಕ್ ಕಾರಣ ಎಂದು ಅಭಿನಂದಿಸಿದರು.
ಸಮಾಜಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಇಂದು ಮಹಿಳೆಯರಿಗೆ ಅತಿ ಹೆಚ್ಚು ಭದ್ರತೆ ರಹಿತ ಸಾಲ ನೀಡಿದ ಖ್ಯಾತಿಯನ್ನು ಡಿಸಿಸಿ ಬ್ಯಾಂಕ್ ಹೊಂದಿದೆ, 7 ಲಕ್ಷಕ್ಕೂ ಹೆಚ್ಚು ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವುದು ಸುಲಭದ ಮಾತಲ್ಲ, ಬ್ಯಾಂಕ್ ಆಡಳಿತ ಮಂಡಳಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಹಿರಿಯ ಮುಖಂಡ ಬಂಡಿ ವೆಂಕಟೇಶಪ್ಪ, ಅಶ್ವಥ್‍ರಾಮ್, ವಕ್ಕಲೇರಿ ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಆನಂದ್ ಕುಮಾರ್, ನಿರ್ದೇಶಕರಾದ ಮುನಿಯಪ್ಪ, ರಮೇಶ್, ಚಂದ್ರೇಗೌಡ, ಚೌಡಮ್ಮ, ಕೃಷ್ಣಪ್ಪ, ಚಿದಾನಂದ್ ಸದಾಶಿವಾ, ಶಾಂತಕುಮಾರಿ, ಗ್ರಾಪಂ ಮಾಜಿ ಅಧ್ಯಕ್ಷ ಮುನಿರಾಜು, ಸೊಸೈಟಿ ವ್ಯವಸ್ಥಾಪಕ ಎಂ. ಮಂಜುನಾಥ್ ಸಿಬ್ಬಂದಿ ಮುಂತಾದವರು ಇದ್ದರು.