ವರದಿ ;ಶಬ್ಬೀರ್ ಅಹಮ್ಮದ್ ಶ್ರೀನಿವಾಸಪು
ಶ್ರೀನಿವಾಸಪುರ : ಜನರ ಸಮಸ್ಯೆಗಳನ್ನು ಅವರ ಗ್ರಾಮಗಳಲ್ಲಿಯೇ ಆಲಿಸಿ ಶೀಘ್ರದಲ್ಲಿ ಪರಿಹರಿಸಲು ಹಾಗೂ ಜನರು ಕಛೇರಿಗಳಿಗೆ ಅಲೆದಾಡದಂತೆ ತಪ್ಪಿಸಲು ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ | ಆರ್ . ಸೆಲ್ವಮಣಿ ಅವರು ತಿಳಿಸಿದರು . ಇಂದು ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಹೋಬಳಿಯ ಬೋಡಿರೆಡ್ಡಿಪಲ್ಲಿ ಮತ್ತು ಮೊರಂಕಿಂದಪಲ್ಲಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ , ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ . ಇಂದು ಸಹ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕಾರ ಮಾಡಿ ಸಾಧ್ಯವಾದವನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು . ಬಾಕಿ ಇದ್ದ ಪಕ್ಷದಲ್ಲಿ ಇಲಾಖೆಯ ಅಧಿಕಾರಿಗಳಿಗೆ ನೇರವಾಗಿ ತಿಳಿಸಿ ಪರಿಹರಿಸಲಾಗುವುದು . ಸರ್ಕಾರಿ ಶಾಲೆಗಳನ್ನು ಮತ್ತು ಮಿನಿ ಅಂಗನವಾಡಿಯನ್ನು ನಿರ್ಮಿಸಲು ಸ್ಥಳದಲ್ಲಿಯೇ ಪರಿಹರಿಸಿ ಮಿನಿ ಅಂಗನವಾಡಿಗೆ ಸ್ಥಳವನ್ನು ಪರಿಶೀಲಿಸಿದರು . ಉಳಿದ ಮನವಿಗಳನ್ನು ಸೀಮಿತ ಅವಧಿಯೊಳಗೆ ಬಗೆಹರಿಸಬೇಕು ಎಂದು ತಿಳಿಸಿದರು . ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಿನಿ ಅಂಗನವಾಡಿಯ ಮೂಲಕ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸೇವಿಸಬೇಕಾದ ಪೌಷ್ಟಿಕ ಆಹಾರಗಳ ಹಸಿ ಹಿಟ್ಟು , ಮೊಟ್ಟೆ , ಬೇಳೆ , ಬೆಲ್ಲ , ಹಾಲಿನ ಪುಡಿ ಒದಗಿಸಲಾಗಿದೆ . ಮಾತೃವಂದನಾ ಕಾರ್ಯಕ್ರಮದಡಿ 5 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು . ಗ್ರಾಮೀಣ ಭಾಗದಲ್ಲಿ ಇರುವ ಸ್ಮಶಾನ ದುರಸ್ಥಿ , ಕೆರೆ ದುರಸ್ಥಿ , ಪಿಂಚಣಿ ಸೌಲಭ್ಯ , ಜಮೀನು ಸರ್ವೇ , ಪಶು ಆಸ್ಪತ್ರೆ , ಕುಡಿಯುವ ನೀರು , ವಿದ್ಯುತ್ ವ್ಯವಸ್ಥೆ , ಜಾಬ್ ಕಾರ್ಡ್ , ಸರ್ಕಾರಿ ಜಮೀನುಗಳ ಒತ್ತುವರಿ ತೆರವು , ವಸತಿ ರಹಿತರಿಗೆ ಮನೆ ನಿರ್ಮಾಣ , ನಿವೇಶನ ಮತ್ತು ವಸತಿ ರಹಿತರಿಗೆ ನಿವೇಶನ ಮತ್ತು ಮನೆ ಸೌಲಭ್ಯ , ಆಧಾರ್ ತಿದ್ದುಪಡಿ , ಬಿ.ಪಿ.ಎಲ್ ಕಾರ್ಡ್‌ಗಳಲ್ಲಿ ಹೆಸರು ಸೇರ್ಪಡೆ , ಹೆಸರು ತೆಗೆದು ಹಾಕುವುದು ಹಾಗೂ ಹೊಸದಾಗಿ ಬಿ.ಪಿ.ಎಲ್ ಕಾರ್ಡ್‌ಗೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು . ಭಾಸ್ಕರ್ ಎಂಬುವವರು ನನಗೆ ನಿವೇಶನ ಮತ್ತು ಮನೆ ಇಲ್ಲಿ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು . ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಏಪ್ರಿಲ್ ಒಳಗೆ ವಸತಿ ರಹಿತರು ಮತ್ತು ನಿವೇಶನ ರಹಿತರ ಪಟ್ಟಿ ನೀಡುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು . ಇವರೆಲ್ಲರಿಗೂ ಅಗತ್ಯ ಜಮೀನನ್ನು ಗುರುತಿಸಿ ನಿವೇಶಗಳನ್ನು ಹಾಗೂ ಮನೆ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು . ಅಹವಾಲು ಸ್ವೀಕಾರದಲ್ಲಿ ಪಿಂಚಣಿ ಸಮಸ್ಯೆ , ಜಮೀನಿನ ಖಾತೆ ಆರ್.ಟಿ.ಸಿ ಸಮಸ್ಯೆ , ನಿವೇಶನ ಇಲ್ಲದಿರುವುದು , ಮನೆ ಇಲ್ಲದಿರುವುದು ಮುಂತಾದ 100 ಕ್ಕೂ ಹೆಚ್ಚು ಅಹವಾಲುಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು . ನಂತರ ಗ್ರಾಮದಾದ್ಯಂತ ಸಂಚರಿಸಿ ಗ್ರಾಮದ ಕುಂದುಕೊರತೆಗಳನ್ನು ವೀಕ್ಷಿಸಿದರು . ಮನೆಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು . ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಅಪರ ಜಿಲ್ಲಾಧಿಕಾರಿಗಳಾದ ಡಾ ಸ್ನೇಹಾ , ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ , ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರ್‌ರಾದ ಎಸ್.ಎಂ. ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.