ಬೆಂಗಳೂರು: ಸ್ಥಳೀಯ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಮಸ್ಯೆ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಿ ಕೊಡುವಂತೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.
ಸಂಪಾದಕರ ಸಂಘದ ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗದೊಂದಿಗೆ ಅಕ್ಟೋಬರ್ 21 ರ ಸೋಮವಾರ ಮಧ್ಯಾಹ್ನ ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಯವರ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿರುವ ಬಿ.ಬಿ. ಕಾವೇರಿ ಅವರನ್ನು ಭೇಟಿ ಮಾಡಿ ಸಂಘದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾಧ್ಯಮಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಹಾಲೀ ಇರುವ ಜಾಹೀರಾತಿನ ದರಕ್ಕೆ ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.12 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕು ಎಂಬ ನಿಯಮವಿದೆ.
ಕಳೆದ ಹತ್ತು ವರ್ಷದಲ್ಲಿ ಐದು ಸಲ ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕಾಗಿತ್ತು. ಆದರೆ ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಜಾಹೀರಾತು ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳಕ್ಕೆ ಕಳೆದ 8 ತಿಂಗಳಲ್ಲಿ ಆನೇಕ ಸಲ ಮನವಿ ಸಲ್ಲಿಸಿದರೂ ಕೂಡ ಇಲಾಖೆಯ ಆಯುಕ್ತರು ಸ್ಪಂದಿಸುತ್ತಿಲ್ಲ. ಇದರಿಂದ ಸ್ಥಳೀಯ ದಿನಪತ್ರಿಕೆಗಳ ಸಂಪಾದಕರಿಗೆ ಆರ್ಥಿಕ ಹಾನಿಯಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ಯವರಿಗೆ ಮನವರಿಕೆ ಮಾಡಿಕೊಟ್ಟರು.
ಮಾಧ್ಯಮ ಪಟ್ಟಿಯಲ್ಲಿರುವ ಎಸ್ಸಿ-ಎಸ್ಟಿ ಸಮುದಾಯಕ್ಕೆ , ಒಬಿಸಿ, ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ನೀಡಲಾಗುತ್ತಿರುವ ಮಾಸಿಕ ಎರಡು ಪುಟಗಳ ಪ್ರೋತ್ಸಾಹ ರೂಪದ ಜಾಹೀರಾತಿನ ಮಾದರಿಯಲ್ಲಿ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಒಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಐದು ವರ್ಷದೊಳಗಿನ ಮಾಲೀಕತ್ವ ಮತ್ತು ಸಂಪಾದಕತ್ವದ ದಿನಪತ್ರಿಕೆಗಳಿಗೆ ಒಂದು ಪುಟ ಜಾಹೀರಾತು ನೀಡುವಂತೆ ಕೋರಲಾಯಿತು.
ಸರ್ಕಾರದಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಬಿಡುಗಡೆಯಾಗುವ ಜಾಹೀರಾತಿನಲ್ಲಿಯೇ ಶೇ.15ರಷ್ಟು ಕಮೀಷನ್ ಮುರಿದು ಕಾನೂನು ಬಾಹಿರವಾಗಿ ಖಾಸಗಿ’ ಸಂಸ್ಥೆಗಳ ಜಾಹೀರಾತು ಏಜನ್ಸಿಗಳಿಗೆ ನೀಡಲಾಗುತ್ತಿದೆ. ಇದನ್ನು ತಡೆ ಹಿಡಿದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕವೇ ನೇರವಾಗಿ ಜಾಹೀರಾತು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು.
ಅಲ್ಲದೇ ನಮ್ಮ ಪತ್ರಿಕೆಗಳ ಸಂಪಾದಕರ ಸಮಸ್ಯೆಗೆ ಸ್ಪಂದಿಸಿರುವ ರಾಜ್ಯದ ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಅವರು ಸೆಪ್ಟಂಬರ್ 30 ರಂದು ಈ ಬಗ್ಗೆ ಆಯುಕ್ತರಿಗೆ ಖುದ್ದು ಕರೆ ಮಾಡಿ ತಕ್ಷಣ ಶೇ.12ರಷ್ಟು ಜಾಹೀರಾತು ದರ ಹೆಚ್ಚಳ ಮಾಡುವಂತೆ ತಿಳಿಸಿದರು. ಅಲ್ಲದೇ ಹಿಂದುಳಿದ ವರ್ಗದ ಪತ್ರಿಕೆಗಳಿಗೆ ಒಂದು ಪುಟದ ಪ್ರೋತ್ಸಾಹದ ರೂಪದ ಜಾಹೀರಾತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದರು.ಆದರೆ ಆಯುಕ್ತರು ಈ ಬಗ್ಗೆ ಸ್ಪಂದಿಸಿಲ್ಲ ಎಂದು ರಾಜ್ಯಾಧ್ಯಕ್ಷರು ಕಾರ್ಯದರ್ಶಿ ಯವರ ಗಮನಕ್ಕೆ ತಂದರು.
ಸಂಪಾದಕರ ಸಂಘದ ನಿಯೋಗದ ಬೇಡಿಕೆ ಮತ್ತು ಹಲವು ಸಮಸ್ಯೆಗಳನ್ನು ತಾಳ್ಮೆಯಿಂದಲೇ ಆಲಿಸಿದ ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಪಾದಕರ ಸಂಘದ ಪ್ರಮುಖರಾದ ರಾಮಕೃಷ್ಣ, ಜಿ.ವೈ. ಪದ್ಮಾ, ಮಹಮದ್ ಯೂನುಸ್, ಟಿ.ಎಸ್ ಕೃಷ್ಣಮೂರ್ತಿ, ವೇದಮೂರ್ತಿ ಎಸ್.ಟಿ, ಡಾ.ಕೆ.ಎಸ್.ಸ್ವಾಮಿ, ದಿನೇಶ್ ಗೌಡಗೆರೆ, ನರಸಿಂಹರಾಜು ಹೆಚ್, ಎಂ.ಬಿ.ಕೊಡಗಲಿ, ರಾಜು ತಳವಾರ ವಿಜಯಪುರ, ಹರೀಶ್ , ಶ್ರೀನಿವಾಸ ಎಂ.ಜೆ, ಕೊಪ್ಪಳ, ಶರಣುಗದ್ದುಗೆ, ವಿಜಯಕುಮಾರ ಬೀದರ್, ಪ್ರಕಾಶ್ ಗುಳೇದಗುಡ್,ಜಾಕೀರ್ ತಾಳಿಕೋಟಿ ಬಾಗಲಕೋಟೆ, ನಾಗೇಶ, ಶಿವಶಂಕರ್, ನಾಗನಗೌಡ, ನಾಗೇಶ್, ಇರ್ಫಾನ್ ಶೇಖ್ ವಿಜಯಪುರ ,
ವಿಜಯಕುಮಾರ್ , ಅಜಯ್ ಭೋಸ್ಲೆ, ರಮೇಶ್ ರೆಡ್ಡಿ ಬೀದರ್, ಜಗದೀಶ್, ದೇವಪ್ಪ ಲಿಂಗದಾಳ್ ಗದಗ, ಎಂ.ಕೆ.ಹರೀಶ್, ಸಿ.ಎನ್.ಕುಮಾರ್, ಎಸ್.ಟಿ.ನವೀನ್ ಕುಮಾರ್, ವೈ.ಕೆ.ಪ್ರವೀಣ್ ಕುಮಾರ್ ಚಿತ್ರದುರ್ಗ, ಡಾ.ಮಲ್ಲಿಕಾರ್ಜುನ ಅಸ್ನಾಳ್ ಯಾದಗಿರಿ, ಮುಂಜುನಾಥ ಗೌಡ, ಸಿ.ರಂಗನಾಥ್ ತುಮಕೂರು ಸೇರಿದಂತೆ ಇತರರಿದ್ದರು.