ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕರ್ನಾಟಕ ರಾಜ್ಯದಲ್ಲಿ ಗೊಲ್ಲ ಅಥವಾ ಯಾದವ ಸಮುದಾಯದ ಸಂಘಟನೆ ತೀರಾ ದುರ್ಬಲವಾಗಿದೆ. ಇಲ್ಲಿ 35 ಲಕ್ಷ ಮಂದಿ ಗೊಲ್ಲ ಸಮುದಾಯದವರಿದ್ದರೂ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಸರ್ಕಾರಿ ಸೌಲಭ್ಯಗಳಿಲ್ಲ. ಗೊಲ್ಲ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಿದ್ದರೂ ಅಲ್ಲಿ ಕಾಡುಗೊಲ್ಲ ಎಂದು ನಮೂದಿಸಿದ್ದರಿಂದ ಯಾದವ ಜನಾಂಗದವರಾದ ಈ ರಾಜ್ಯದ ಗೊಲ್ಲರು ಸೌಲಭ್ಯವಂಚಿತರಾಗಿದ್ದಾರೆ. ಗೊಲ್ಲ ಎಂದರೆ ಕಾಡುಗೊಲ್ಲ ಮತ್ತು ಯಾದವ ಎಂದರೆ ಉತ್ತರ ಪ್ರದೇಶ ಮೂಲದವರೆಂದು ಸರ್ಕಾರ ಗುರುತಿಸುವುದರಿಂದ ದುರ್ಬಲ ವರ್ಗದವರಾದ ಕರ್ನಾಟಕದ ಗೊಲ್ಲರು ಸಂಕಷ್ಟದಲ್ಲೇ ಇರುವಂತಾಗಿದೆ. ಆದ್ದರಿಂದ ನಾವು ಸಂಘಟನೆಯನ್ನು ಬಲಗೊಳಿಸಿ ಸರ್ಕಾರಕ್ಕೆ ಅಹವಾಲು ಸಲ್ಲಿಸಬೇಕಾಗಿದೆ ಎಂದು ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಗೊಲ್ಲ ಹೇಳಿದರು.
ಕುಂದಾಪುರ ತಾಲೂಕು ಗೊಲ್ಲರ (ಯಾದವ) ಸಮಾಜ ಸಂಘದ ವಾರ್ಷಿಕ ಅಧಿವೇಶನದ ಸಂದರ್ಭದಲ್ಲಿ, ಎರಡನೇ ಬಾರಿ ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಗ್ಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೋಟೇಶ್ವರ ಮಾರ್ಕೊಡು ಸ್ವಾಗತ್ ಸಭಾಂಗಣದಲ್ಲಿ ನಡೆದ ಈ ಅಧಿವೇಶನದ ಸಭಾಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ರಾಮು ಗೊಲ್ಲ ವಹಿಸಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿ ಮುಂದಿನ ಅವಧಿಗೂ ಹಾಲಿ ಅಧ್ಯಕ್ಷ ರಾಮು ಗೊಲ್ಲರೇ ಅಧ್ಯಕ್ಷರಾಗಿ ಸರ್ವಾನುಮತದಿಂದ ಮರು ಆಯ್ಕೆಗೊಂಡರು. ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಎಸ್. ಪುಟ್ಟಣ್ಣ ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕು ಸಂಘಗಳ ವತಿಯಿಂದ ಜಾಗ ಗುರುತಿಸಿದರೆ ಗೊಲ್ಲ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ 10 ಲಕ್ಷ ರೂ. ಸಿಗುತ್ತದೆ. ಜಿಲ್ಲಾ ಸಂಘದ ಸಮುದಾಯ ಭವನ ನಿರ್ಮಾಣಕ್ಕಾಗಿ ಬ್ರಹ್ಮಾವರದಲ್ಲಿ 25 ಸೆಂಟ್ಸ್ ಸ್ಥಳ ಗುರುತಿಸಲಾಗಿದ್ದು ಮುಂದಿನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬ ವಿವರ ನೀಡಿದರು.
ಜಿಲ್ಲಾ ಕೋಶಾಧಿಕಾರಿ ವೆಂಕಟರಮಣ, ಪ್ರಕಾಶ್ ಗೊಲ್ಲ, ಅಣ್ಣಯ್ಯ ಗೊಲ್ಲ, ತಾಲೂಕು ಸಂಘದ ಗೌರವಾಧ್ಯಕ್ಷ ರಾಜೀವ ಗೊಲ್ಲ ಮಾತನಾಡಿ ಸಂಘಟನೆಯನ್ನು ಬಲಗೊಳಿಸುವಂತೆ ಮನವಿ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್ ಮಾತನಾಡಿ, ಜಿಲ್ಲೆಯ ಸಮಗ್ರ ಗೊಲ್ಲ ಸಮುದಾಯದವರ ಮಾಹಿತಿ ಮತ್ತು ಇತಿಹಾಸವನ್ನೊಳಗೊಂಡ ‘ಗೋಕುಲ’ ಸಮಗ್ರ ಸಂಚಿಕೆಯೊಂದನ್ನು ಹೊರತರಲು ನಿರ್ಣಯಿಸಿರುವುದಾಗಿ ವಿವರಿಸಿದರು. ಗೊಲ್ಲ ಸಮುದಾಯದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿದ್ಯಾನಿಧಿಯನ್ನು ಸ್ಥಾಪಿಸುವುದಾಗಿಯೂ, ಜಿಲ್ಲೆಯಲ್ಲಿ ನೂತನವಾಗಿ ಗ್ರಾಮ ಪಂಚಾಯತ್ ಗಳಿಗೆ ಆಯ್ಕೆಗೊಂಡ ಗೊಲ್ಲ ಸಮುದಾಯದ ಸದಸ್ಯರನ್ನು ಮುಂದಿನ ಫೆ.28 ರಂದು ಬ್ರಹ್ಮಾವರದಲ್ಲಿ ಆಯೋಜಿಸಿರುವ ಬೃಹತ್ ಸಮಾರಂಭದಲ್ಲಿ ಸನ್ಮಾನಿಸುವುದಾಗಿಯೂ ತಿಳಿಸಿದರು.
ರಾಘವೇಂದ್ರ ಗೊಲ್ಲ ಸ್ವಾಗತಿಸಿ ವಂದಿಸಿದರು. ಸುರೇಶ್ ಗೊಲ್ಲ ಕಾರ್ಯಕ್ರಮ ನಿರೂಪಿಸಿದರು.