ವಿಶ್ವ ಕುಂದಾಪುರ
ಹತ್ತಾರು ನೂರಾರು ಜನರು ಭಾಗವಹಿಸಿದ ಯಾವುದೇ ಸಣ್ಣಪುಟ್ಟ ಕಾರ್ಯಕ್ರಮಗಳಿರಬಹುದು, ಅಥವಾ ಸಾವಿರಾರು ಜನರು ಪಾಲ್ಗೊಂಡ ಬಹಿರಂಗ ಸಭೆಗಳೇ ಇರಬಹುದು; ಆಗಾಗ ಕೆಲವು ಮುಖಂಡರು ವೇದಿಕೆಗಳಲ್ಲೇ; ಇನ್ನೂ ಕೆಲವೊಮ್ಮೆ ತೀವ್ರ ಹೋರಾಟಗಳ ನಡುವೆಯೂ ಔಷಧಿ ಸೇವಿಸುವುದನ್ನು ನಾವು ಕಾಣುತ್ತೇವೆ. ಅನಿವಾರ್ಯವಾಗಿ ಬಿಸ್ಕತ್ನಂಥ ಆಹಾರ ತಿನ್ನುವುದನ್ನು ನೋಡುತ್ತೇವೆ. ಆದರೆ, ಉಸಿರಾಡುವ ಕಿಟ್, ಅಂದರೆ ಆಮ್ಲಜನಕದ ಸಿಲಿಂಡರ್ ಹೊತ್ತುಕೊಂಡೇ ಈ ರೀತಿ ಸಭೆ-ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ನೋಡಿದ್ದೀರಾ? ಹೌದು, ಅಂಥ ದೃಶ್ಯವನ್ನು ಇತ್ತೀಚೆಗೆ ಬೆಂಗಳೂರಿನಲ್ಲೂ ಕೋಲಾರದಲ್ಲೂ ಕಾಣಬಹುದಾಗಿತ್ತು.
ಜೀವಪರ ಚಳವಳಿಯ ನೇತಾರ, ಆಪ್ತ ವಲಯದಲ್ಲಿ ಜಿಸಿಬಿ ಎಂದೇ ಚಿರಪರಿಚಿತರಾದ ಜಿ.ಸಿ. ಬಯ್ಯಾರೆಡ್ಡಿ ಅವರೇ ಉಸಿರಾಟದ ತೀವ್ರ ತೊಂದರೆಯಿದ್ದರೂ ಕೃತಕ ಉಸಿರಾಟದ ವ್ಯವಸ್ಥೆಯೊಂದಿಗೆ ಊರೂರು ತಿರುಗಾಡುತ್ತಿದ್ದ ಒಬ್ಬ ಹೋರಾಟದ ಒಡನಾಡಿ.
ಈ ರೀತಿ, ವೈಯಕ್ತಿಕ ಆರೋಗ್ಯ ವಿಚಾರ ಏನೇ ಇದ್ದರೂ ಚಳವಳಿಯನ್ನು ಬಿಡಬಾರದು ಎಂಬ ದೃಢ ಮನಸ್ಸಿನಿಂದ ಉಸಿರಾಡುತ್ತಿದ್ದ ಈ ಅಪರೂಪದ ಚಳವಳಿಕಾರನ ಉಸಿರು ಶನಿವಾರ ಮುಂಜಾನೆ (2025 ಜನವರಿ 4) ನಿಂತು ಅವರ ಕುಟುಂಬ ಮಾತ್ರವಲ್ಲದೆ ಅವರು ಒಡನಾಡಿದ್ದ ಚಳವಳಿಯ ಲಕ್ಷಾಂತರ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಸುಮಾರು 42 ವರ್ಷಗಳಿಂದ ನನಗೆ ಪರಿಚಿತರಾಗಿದ್ದ ಜಿಸಿಬಿ ಅಗಲಿಕೆ ತೀರಾ ಹತ್ತಿರದ ಬಂಧುವೊಬ್ಬರನ್ನು ಕಳೆದುಕೊಂಡ ನೋವನ್ನು ಸೃಷ್ಟಿಸಿದೆ. ಚಳವಳಿಗಳಲ್ಲಿ ಸಂಪರ್ಕಕ್ಕೆ ಬಂದವರನ್ನು ಆಪ್ತತೆಯಿಂದ ಕಾಣುವ ಅವರ ಪರಿಯೇ ಅಂಥದ್ದು.
ವಿದ್ಯಾರ್ಥಿ ದಿನಗಳಿಂದಲೇ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಸಂಘಟಕನಾಗಿ ಹೊರಹೊಮ್ಮಿದ್ದ ಜಿಸಿಬಿ ನೇತೃತ್ವದಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಸಹಿತ ಬಯಲುಸೀಮೆ ಭಾಗದಲ್ಲಿ ನಡೆಯುತ್ತಿದ್ದ ದಿಟ್ಟ ಹೋರಾಟಗಳು ಕರಾವಳಿ-ಮಲೆನಾಡು ಭಾಗದಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ನನ್ನಂಥವರಿಗೆ ಪರಿಚಿತವಾಗಿ ಸ್ಫೂರ್ತಿಯುತವೂ ಆಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ಸರ್ವರಿಗೂ ಶಿಕ್ಷಣ-ಸರ್ವರಿಗೂ ಉದ್ಯೋಗ ಬೇಡಿಕೆ ಆಧಾರದಲ್ಲಿ ಎಸ್ಎಫ್ಐ ಮತ್ತು ಡಿವೈಎಫ್ಐ ನೇತೃತ್ವದಲ್ಲಿ 1981ರಲ್ಲಿ ನಡೆದ ಅಖಿಲ ಭಾರತ ಮಟ್ಟದ ಆಂದೋಲನದ ಭಾಗವಾಗಿ ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದು ನನ್ನ ಪ್ರಥಮ ಬೆಂಗಳೂರು ದರ್ಶನವಾಗಿತ್ತು. ಅಲ್ಲಿಯೇ ಜಿಸಿಬಿಯವರನ್ನು ಮೊದಲ ಬಾರಿಗೆ ಕಂಡಂಥ ನೆನಪು. ಆದರೆ, 1982-83ರ ಆಸುಪಾಸಿನಲ್ಲಿ ನಡೆದ ಎಸ್ಎಫ್ಐ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಬಹುಶಃ ನಮ್ಮ ಒಡನಾಟ ಗಟ್ಟಿಯಾಯಿತು. ಆ ಸಮ್ಮೇಳನದಲ್ಲಿ ನಾನು ಮತ್ತು ಜಿಸಿಬಿ ಇಬ್ಬರೂ ಎಸ್ಎಫ್ಐ ರಾಜ್ಯ ಸಮಿತಿ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದೆವು. ನಂತರ ಅವರು ಎಸ್ಎಫ್ಐ ರಾಜ್ಯ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಅಧ್ಯಕ್ಷ, ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ … ಹೀಗೆ ಹಲವಾರು ಪ್ರಮುಖ ಜವಾಬ್ದಾರಿ ಸ್ಥಾನಗಳಲ್ಲಿ ರಾಜ್ಯದ ಎಡ ಪಂಥೀಯ ಚಳವಳಿ, ಜನಪರ ಆಂದೋಲನ, ಕೋಮುವಾದ-ವಿರೋಧಿ ಆಂದೋಲನ ಹಾಗೂ ಅನ್ನದಾತರ ಹೋರಾಟಗಳನ್ನು ನೆಲೆಗೊಳಿಸಲು ಸಮರ್ಪಣಾ ಭಾವದಿಂದ ದುಡಿದಿದ್ದು ಕಣ್ಣ ಮುಂದಿರುವ ವಾಸ್ತವ ಇತಿಹಾಸ.
ಬೇರೆ ರಾಜಕೀಯ ಪಕ್ಷಗಳು, ಸಂಘಟನೆಗಳಂತಲ್ಲದೆ ಎಡ ಪಂಥೀಯರಲ್ಲಿ ಯಾವುದೇ ಪದಾಧಿಕಾರ ಎನ್ನುವುದು ಅದು ಅಧಿಕಾರವಲ್ಲ; ಜವಾಬ್ದಾರಿ ನಿರ್ವಹಿಸುವ ಮಹತ್ವದ ಅವಕಾಶ. ಒಬ್ಬ ಮಾಕ್ರ್ಸ್ವಾದಿಗಿರಬೇಕಾದ ಅಧ್ಯಯನಶೀಲತೆಯೊಂದಿಗೆ ಜಿಸಿಬಿ ಅದನ್ನು ಸಮರ್ಥವಾಗಿ ನಿರ್ವಹಿಸಿದರು ಎನ್ನುವುದರಲ್ಲಿ ಅನುಮಾನವಿಲ್ಲ. ಮಾಧ್ಯಮ ಗೋಷ್ಠಿಗಳೇ ಇರಲಿ ಕಾರ್ಯಕ್ರಮಗಳೇ ಇರಲಿ ಅವರ ಭಾಷಣಗಳಲ್ಲಿ ಅಧ್ಯಯನಶೀಲತೆಯ ಸೊಗಸು ಕಾಣಿಸುತ್ತಿತ್ತು.
2007ರ ಆರಂಭದಲ್ಲಿ ದಿ ಹಿಂದೂ' ಜಿಲ್ಲಾ ವರದಿಗಾರನಾಗಿ ಕೋಲಾರಕ್ಕೆ ಬಂದಿದ್ದ ನನಗೆ ಹಲವು ವರ್ಷಗಳ ಅಂತರದ ನಂತರ ಜಿಸಿಬಿಯವರೊಂದಿಗೆ ಆಗಾಗ ಮಾತನಾಡುವ, ಅವರ ಹೋರಾಟದ ಕೆಚ್ಚನ್ನು ಕಾಣುವ ಅವಕಾಶ ಲಭಿಸಿತ್ತು. ಒಬ್ಬ ಪತ್ರಕರ್ತನಾಗಿ, ಅನ್ನದಾತರ ಬಿಕ್ಕಟ್ಟು-ಸಂಕಷ್ಟಗಳ ಬಗ್ಗೆ ವಿವರ ಪಡೆಯಲು ಜಿಸಿಬಿ ಒಬ್ಬ ಉತ್ತಮ ಮಾಹಿತಿ ಮೂಲವಾಗಿದ್ದರು. ಪಕ್ಷ ಭೇದ ಮರೆತು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಮಾಧ್ಯಮದವರ ಜತೆಯೂ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಅವಿಭಜಿತ ಕೋಲಾರ ಜಿಲ್ಲೆ ಮಾತ್ರವೇ ಅಲ್ಲದೆ ಇಡೀ ರಾಜ್ಯದಲ್ಲಿ ಶೋಷಿತ ಜನರಿಗೆ ಆಗುವ ಅನ್ಯಾಯ ಹಾಗೂ ಪತ್ರಿಕೆಗಳಲ್ಲಿ ಬರುತ್ತಿದ್ದ ವರದಿಗಳ ಬಗ್ಗೆ ನಿಕಟ ಗಮನ ಹರಿಸುತ್ತಿದ್ದುದಕ್ಕೆ ಒಂದು ಉದಾಹರಣೆ ಕೊಡಬಯಸುತ್ತೇನೆ. ನಾನು ಕೋಲಾರಕ್ಕೆ ಬಂದಿದ್ದ ಸಂದರ್ಭದಲ್ಲಿ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಇಲ್ಲಿ ಜಾರಿಯಾಗದೇ ಇದ್ದದ್ದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ನದಿ-ನಾಲೆಗಳಿಲ್ಲದ, ಕೈಗಾರಿಕೆಗಳಿಲ್ಲದ ಒಂದು ಪ್ರದೇಶದಲ್ಲಿ ಗ್ರಾಮೀಣರಿಗೆ ಉದ್ಯೋಗ ಖಾತರಿಪಡಿಸಲೆಂದೇ ಇರುವ ನರೇಗಾ ಯಾಕೆ ಜಾರಿಯಾಗಿಲ್ಲ ಎನ್ನುವುದು ಅದಕ್ಕೆ ಕಾರಣವಾಗಿತ್ತು. ಅದರ ಬಗ್ಗೆ
ದಿ ಹಿಂದೂ’ನಲ್ಲಿ ನಾನು ಬರೆದ ಒಂದು ವಿಸ್ತ್ರತ ವರದಿ ವಿಧಾನಸೌಧದ ಮೊಗಸಾಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು ಎನ್ನುವುದನ್ನು ಸ್ವಲ್ಪ ಸಮಯದ ನಂತರ ಭೇಟಿಯಾಗಿದ್ದ ಜಿಸಿಬಿ ತಿಳಿಸಿದ್ದರು. ಆ ವರದಿ ಕಂಡು ಜಿಲ್ಲೆಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಪರಿಶೀಲಿಸಿದ ನಂತರ ನರೇಗಾವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು.
- ಸಮ್ಮೇಳನದಲ್ಲಿ ಭಾಗವಹಿಸಲು ಕಾತರ…
2024ರ ಡಿಸೆಂಬರ್ 29ರಿಂದ 31ರ ವರೆಗೆ ತುಮಕೂರಿನಲ್ಲಿ ನಡೆದ ಸಿಪಿಐ (ಎಂ) 24ನೇ ರಾಜ್ಯ ಸಮ್ಮೇಳನಕ್ಕೆ ಹೋಗಲು ಅನಾರೋಗ್ಯವಿದ್ದರೂ ಜಿಸಿಬಿ ತಯಾರಿ ಮಾಡಿಕೊಂಡಿದ್ದರು. ಆಸ್ಪತ್ರೆಗೆ ದಾಖಲಾದರೆ ಸಮ್ಮೇಳನಕ್ಕೆ ಹೋಗಲು ಆಗುವುದಿಲ್ಲವೆಂಬುದು ಅವರ ದೃಢ ಅಭಿಪ್ರಾಯವಾಗಿತ್ತು. ಆದರೆ ಕುಟುಂಬಸ್ಥರು ಹಾಗೂ ಪಕ್ಷದವರು ಮನವರಿಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನುತ್ತಾರೆ ಕೋಲಾರದಲ್ಲಿ ನಾಲ್ಕು ದಶಕ ಕಾಲ ಅವರ ಒಡನಾಡಿಯಾಗಿದ್ದ ಗಾಂಧಿನಗರ ನಾರಾಯಣಸ್ವಾಮಿ.
ನವೆಂಬರ್ ಕೊನೆಯಲ್ಲಿ ನಡೆದ ಸಿಪಿಐ (ಎಂ) ಕೋಲಾರ ಜಿಲ್ಲಾ ಸಮ್ಮೇಳನದಲ್ಲಿ ಆಕ್ಸಿಜನ್ ಕಿಟ್ ಸಮೇತರಾಗಿ ಭಾಗವಹಿಸಿ ಸ್ಫೂರ್ತಿಯುತ ಭಾಷಣ ಮಾಡಿದ್ದೇ ಜಿಸಿಬಿಯವರ ಕೊನೆಯ ಭಾಷಣವಾಗಿದೆ ಎಂದು ಕೆಪಿಆರ್ಎಸ್ ಕಾರ್ಯಕರ್ತೆ ಗಂಗಮ್ಮ ಗದ್ಗದಿತರಾಗಿ ನೆನಪಿಸಿಕೊಳ್ಳುತ್ತಾರೆ.
ಉಸಿರು ಹೋದ ಮೇಲೂ ಹೆಸರು ಉಳಿಯುವಂಥ ಕೆಲಸ ಮಾಡಬೇಕು ಎನ್ನುವ ಒಂದು ಮಾತಿದೆ. ಜಿಸಿಬಿಯವರು ಹೆಸರು ಮಾಡಿಕೊಳ್ಳಲು ಕೆಲಸ ಮಾಡಲಿಲ್ಲ. ಶೋಷಿತರ ಜೀವನದಲ್ಲಿ ಉಲ್ಲಾಸದ ಹೊಸ ಉಸಿರು ತುಂಬಲು ಅವರು ಉಸಿರಾಟದ ಸಮಸ್ಯೆ ನಡುವೆಯೂ ಅಕ್ಷರಶಃ ಜೀವನದ ಕೊನೆ ಉಸಿರು ಇರುವವರೆಗೂ ಶ್ರಮಿಸಿದರು. ಈ ರೀತಿಯಾಗಿ ಜೀವನ ನಡೆಸಿದ ಅವರು ಹೋರಾಟಗಾರರಿಗೆ ಒಂದು ಮಾದರಿ. ಜಿಸಿಬಿ ಆಕ್ಸಿಜನ್ ಕಿಟ್ನೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದುದನ್ನು ನನ್ನ ಮಡದಿ ಮಮತಾ ಬೆರಗುಗಣ್ಣಿನಿಂದ ಕಂಡು ಚಳವಳಿಕಾರರು ಹೀಗೂ ಇರುತ್ತಾರೆಯೇ ಎಂದು ಹಲವು ಬಾರಿ ನನ್ನನ್ನು ಪ್ರಶ್ನಿಸಿದ್ದಿದೆ.