ಕೋಲಾರ:- ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರ ಲಾಂಛನಗಳ ಕುರಿತು ಅಧಿಕೃತ ಮಾಹಿತಿ ನೀಡುವ ಸಂಸ್ಥೆ ಭಾರತ ಸೇವಾದಳವಾಗಿದ್ದು, ವಿದ್ಯಾರ್ಥಿಗಳು ಸೇವಾದಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಸರಕಾರಿ ಜೂನಿಯರ್ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿನಿಯರಿಗೆ ಭಾರತ ಸೇವಾದಳದಿಂದ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ನೆನಪು ಮತ್ತು ರಾಷ್ಟ್ರ ಧ್ವಜ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಧ್ವಜಾರೋಹಣೆಯನ್ನು ಕೇವಲ ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರವೇ ನೆರವೇರಿಸಿ ಸುಮ್ಮನಾಗುವುದು ಸರಿಯಲ್ಲ, ಪ್ರತಿ ಹಂತದಲ್ಲಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕಾಗಿರುವುದು ಪ್ರತಿ ಭಾರತೀಯರ ಕರ್ತವ್ಯವಾಗಬೇಕೆಂದರು.
ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಉನ್ನತಾ„ಕಾರಿಗಳಾಗಿ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಪಣ ತೊಡಬೇಕೆಂದು ಅವರು ಸಲಹೆ ನೀಡಿದರು.
ವೇಮಗಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಟರಾಜ್ ಕ್ವಿಟ್ ಇಂಡಿಯಾ ಚಳವಳಿ ಕುರಿತಂತೆ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಹಂತಗಳಲ್ಲಿ ಅನೇಕ ಚಳವಳಿಗಳು ನಡೆದಿವೆ. ಆದರೆ, ಈ ಎಲ್ಲಾ ಚಳವಳಿಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟದ ಅಂತಿಮ ಭಾಗವಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮಹಾತ್ಮ ಗಾಂ„ೀಜಿಯವರು ಮಾಡು ಇಲ್ಲವೇ ಮಡಿ ಎಂಬ ಸಂದೇಶವನ್ನು ರವಾನಿಸಿ ಹುರಿದುಂಬಿಸಿದ್ದರಿಂದ 1947 ಆಗಸ್ಟ್ 15 ರಂದು ದೇಶವು ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಭಾರತೀಯರು ಕ್ವಿಟ್ ಇಂಡಿಯಾ ಚಳವಳಿಯ ನೆನಪನ್ನು ಸ್ಮರಿಸುತ್ತಲೇ ಇರಬೇಕೆಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಂದಿ ತ್ಯಾಗ ಬಲಿದಾನ ಮಾಡಿದ್ದಾರೆ, ಈ ಪೈಕಿ ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ರ ಹೋರಾಟ ಇಂದಿಗೂ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದು ಬಣ್ಣಿಸಿದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಭಾರತದ ತ್ರಿವರ್ಣ ಧ್ವಜ ರೂಪುಗೊಂಡ ಬಗೆ ಮತ್ತು ಇದಕ್ಕೆ ಕಾರಣಕರ್ತರಾದ ವ್ಯಕ್ತಿಗಳ ಸ್ಮರಣೆ ಮಾಡಿ, ರಾಷ್ಟ್ರಧ್ವಜ ಸಂಹಿತೆಯನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನವಾಗುವುದನ್ನು ತಡೆಯಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್, ಜೂನಿಯರ್ ಕಾಲೇಜಿನ ಉಪನ್ಯಾಸಕರಾದ ಜೆ.ಜಿ.ನಾಗರಾಜ್, ಗೋಪಿಕೃಷ್ಣನ್, ಚಂದ್ರಪ್ಪ, ವೆಂಕಟೇಶ್, ಬಸವರಾಜ್ ಹಾಜರಿದ್ದರು.
ಸೇವಾದಳ ಸಂಘಟಕ ದಾನೇಶ್ ಕಾರ್ಯಕ್ರಮ ನಿರೂಪಿಸಿದರು.