ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ:ರೋಟರಿಯಿಂದ ವಿದ್ಯಾಸೇತು ಪುಸ್ತಕ ವಿತರಣೆ

JANANUDI.COM NETWORK


ಕುಂದಾಪುರ: ಕೊರೊನಾದಿಂದ ವಿದ್ಯಾರ್ಥಿಗಳ ಕಲಿಕೆಯ ಹಿನ್ನೆಡೆಯ ದೃಷ್ಟಿಯಿಂದ ವಿದ್ಯಾಸೇತು ಪುಸ್ತಕವನ್ನು ಕರ್ನಾಟಕ ರಾಜ್ಯ ಪಠ್ಯ ಕ್ರಮದಲ್ಲಿ ಕಲಿಯುತ್ತಿರುವ ಕನ್ನಡ ಮಾಧ್ಯಮದ ಸರಕಾರಿ ಮತ್ತು ಅನುದಾನಿತ ಮಕ್ಕಳ ಹಿತದೃಷ್ಟಿಯಿಂದ ರೂಪಿಸಲಾಗಿದೆ ಎಂದು ರೋಟರಿ ಝೋನ್ 1ರ ಸಹಾಯಕ ಗವರ್ನರ್ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್ ಕೊಡಮಾಡಿದ ವಿದ್ಯಾಸೇತು ಪುಸ್ತಕವನ್ನು ವಿತರಿಸಿ ಮಾತನಾಡಿದರು.
ರೋಟರಿ ಜಿಲ್ಲೆ 3182ರ ವ್ಯಾಪ್ತಿಯಲ್ಲಿ ಬರುವ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳ ಈ ವರ್ಷ ಎಸ್‍ಎಸ್‍ಎಲ್‍ಸಿಯಲ್ಲಿರುವ ಸುಮಾರು 3000 ವಿದ್ಯಾರ್ಥಿಗಳ ಜ್ಞಾನ ಸಂವಹನದ ಕೊರತೆಯನ್ನು ಕಂಡು ವಿಷಯ ತಜ್ಞರು ಈ ಪುಸ್ತಕವನ್ನು ರೂಪಿಸಿದ್ದಾರೆ. ಈ ಪುಸ್ತಕ ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ಸಹಕಾರಿಯಾಗಲಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಅತೀ.ವಂ.ಫಾ. ಸ್ಟ್ಯಾನಿ ತಾವ್ರೋ ವಹಿಸಿದ್ದರು. ಪುಸ್ತಕದ ದಾನಿಗಳಾದ ಅಜಯ ಹವಾಲ್ದಾರ್, ಭಾಸ್ಕರ್ ಬಾಣ, ರೋಟರಿ ಕ್ಲಬ್ ಕುಂದಾಪುರ ಸನ್‍ರೈಸ್‍ನ ಅಧ್ಯಕ್ಷೆ ಗಿರಿಜಾ ಮಾಣಿಗೋಪಾಲ್ ಮೊದಲಾದವರು ಶುಭಹಾರೈಸಿದರು. . ಸಿಸ್ಟರ್ ಚೇತನಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಪ್ರೀತಿ ಪಾಯಸ್, ಸುಶೀಲಾ ಖಾರ್ವಿ, ಸ್ಮಿತಾ ಡಿ.ಸೋಜಾ ಸಹಕರಿಸಿದರು