ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಎಸ್ಸೆಸ್ಸೆಲ್ಸಿ ಸರ್ಕಾರಿ ಶಾಲೆಗಳ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಂ.ಲಿಖಿತಾ, ಲವೀನಾ ಮೆಂಡೋನ್ಸಾ, ಷಾಪೂರು ಸರ್ಕಾರಿ ಪ್ರೌಢಶಾಲೆಯ ವರಲಕ್ಷ್ಮಿ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಉಚಿತ ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಆಗಿದ್ದ ಶೈಕ್ಷಣಿಕ ಹಿನ್ನಡೆಯ ನಡುವೆಯೂ ಈ ಮಕ್ಕಳು ಸಾಧನೆ ಮಾಡಿದ್ದಾರೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲೇ 6ನೇ ಸ್ಥಾನ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಂ.ಲಿಖಿತ 625ಕ್ಕೆ 615 ಅಂಕ, ಲವೀನಾ ಮೆಂಡೋನ್ಸಾ 625 ಕ್ಕೆ 615 ಅಂಕ ಹಾಗೂ ಷಾಪೂರು ಸರ್ಕಾರಿ ಪ್ರೌಢಶಾಲೆಯ ವರಲಕ್ಷ್ಮಿ 613 ಅಂಕಗಳನ್ನು ಗಳಿಸಿ ಸರ್ಕಾರಿ ಶಾಲೆಗಳ ಸಾಧಕರಾಗಿದ್ದು, ಅವರಿಗೆ ಸರ್ಕಾರದ ವತಿಯಿಂದ ಲ್ಯಾಪ್ ಟಾಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಮಕ್ಕಳಿಗೆ ಲ್ಯಾಪ್‍ಟಾಪ್ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಈ ಮಕ್ಕಳನ್ನು ಆದರ್ಶವಾಗಿಟ್ಟುಕೊಂಡು ಇತರೆ ಮಕ್ಕಳು ಇಂತಹ ಸಾಧಕರಾಗಿ ಹೊರಹೊಮ್ಮಬೇಕು ಎಂದರು.
ಜಿಲ್ಲಾಮಟ್ಟದಲ್ಲಿ 625ಕ್ಕೆ 619 ಅಂಕಗಳೊಂದಿಗೆ ಸರ್ಕಾರಿ ಶಾಲೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಕ್ಯಾಲನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕೆ.ಎಂ.ಅನುಷಾರಿಗೆ ಜಿಲ್ಲಾಮಟ್ಟದಲ್ಲಿ ಲ್ಯಾಪ್‍ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪರೀಕ್ಷಾ ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಇಸಿಓ ಆರ್.ಶ್ರೀನಿವಾಸನ್ ಶಿಕ್ಷಕರ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುನಿಯಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಓ.ಮಲ್ಲಿಕಾರ್ಜುನ ಶಿಕ್ಷಕ ವೆಂಕಟೇಶಪ್ಪ ಮತ್ತಿತರರು ಹಾಜರಿದ್ದು,
ಮಕ್ಕಳಿಗೆ ಶುಭ ಕೋರಿದರು.