ಬೆಂಗಳೂರು: ಮಾ.27: 28-03-2022 ರಿಂದ ದಿನಾಂಕ 11-04-2022ರವರೆಗೆ ನಡೆಯಲಿರುವಂತ ಎಸ್ ಎಸ್ ಎಲ್ ಸಿ ಫೈನಲ್ ಪರೀಕ್ಷೆಗೆ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ಬರುವುದು ಕಡ್ಡಾಯವಾಗಿದೆ. ಒಂದು ವೇಳೆ ವಸ್ತ್ರ ಸಂಹಿತೆಯನ್ನು ಪಾಲಿಸದೇ ಇದ್ದರೇ ಪರೀಕ್ಷೆಗೆ ನೋ ಎಂಟ್ರಿ ಎಂಬುದಾಗಿ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು.. ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಸ್ತ್ರ ಸಂಹಿತೆ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸತಕ್ಕದ್ದು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸತಕ್ಕದ್ದು ಎಂದು ಆದೇಶಿಸಲಾಗಿದೆ. ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದಂತ ರಿಟ್ ಅರ್ಜಿಯ ತೀರ್ಪಿನಲ್ಲಿಯೂ ಸರ್ಕಾರದ ಆದೇಶಗಳನ್ನು ಸಿಂಧುಗೊಳಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರವನ್ನು ಹಾಗೂ ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಿ, ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.