ಕೋಲಾರ:- ಜಿಲ್ಲೆಯ 17 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಗಣಿತ ವಿಷಯದ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಇಂದು ಪರೀಕ್ಷೆಗೆ ಜಿಲ್ಲೆಯ 385 ಪ್ರೌಢಶಾಲೆಗಳ 4293 ಮಂದಿ ನೋಂದಣಿ ಮಾಡಿದ್ದು, 534 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಪರೀಕ್ಷೆ ನಡೆದಿದೆ, ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 4293 ಮಂದಿ ಪೈಕಿ 3759 ವಿದ್ಯಾರ್ಥಿಗಳ ಪೈಕಿ 3516 ಮಂದಿ ಹಾಜರಾಗಿದ್ದು, 534 ಮಂದಿ ಗೈರಾಗಿದ್ದರು ಎಂದು ತಿಳಿಸಿದರು.
ತಾಲ್ಲೂಕುವಾರು ಕೇಂದ್ರಗಳ ವಿವರ
ಬಂಗಾರಪೇಟೆ ತಾಲ್ಲೂಕಿನ 3 ಕೇಂದ್ರಗಳಲ್ಲಿ ಗಣಿತ ವಿಷಯಕ್ಕೆ ಒಟ್ಟು 849 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 729 ವಿದ್ಯಾರ್ಥಿಗಳು ಹಾಜರಾಗಿ 120 ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ 3 ಕೇಂದ್ರಗಳಲ್ಲಿ 955 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 882 ಮಂದಿ ಹಾಜರಾಗಿ 73 ಮಂದಿ ಗೈರಾಗಿದ್ದಾರೆ. ಕೋಲಾರದ 5 ಕೇಂದ್ರಗಳಲ್ಲಿ 757 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 706 ಮಂದಿ ಹಾಜರಾಗಿ 114 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮಾಲೂರಿನ 2 ಕೇಂದ್ರಗಳಲ್ಲಿ 703 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 606 ಮಂದಿ ಹಾಜರಾಗಿ 97 ಮಂದಿ ಗೈರಾಗಿದ್ದಾರೆ. ಮುಳಬಾಗಿಲಿನ 3 ಕೇಂದ್ರಗಳಲ್ಲಿ 664 ಮಂದಿ ನೋಂದಾಯಿಸಿದ್ದು, ಈ ಪೈಕಿ 569 ಮಂದಿ ಹಾಜರಾಗಿ 95 ಮಂದಿ ಗೈರಾಗಿದ್ದಾರೆ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 1 ಕೇಂದ್ರದಲ್ಲಿ 242 ಮಂದಿ ನೋಂದಾಯಿಸಿದ್ದು, 207 ಮಂದಿ ಹಾಜರಾಗಿ 35 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮೂರನೇ ದಿನದ ಗಣಿತ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.