

ಶ್ರೀನಿವಾಸಪುರ: ಯರ್ರಂವಾರಿಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಆಗ್ರಹಿಸಿದರು.
ಸೋಮವಾರ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ 40 ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಉಳಿಸುವ ಉದ್ದೇಶದಿಂದ ಪೋಷಕರನ್ನು ಕಾಡಿ ಬೇಡಿ ಮಕ್ಕಳನ್ನು ದಾಖಲು ಮಾಡಲಾಗಿದೆ. ಇರುವ ಇಬ್ಬರು ಶಿಕ್ಷಕರ ಪೈಕಿ ಒಬ್ಬ ಶಿಕ್ಷಕಿ ಹೆರಿಗೆ ರಜೆಯಲ್ಲಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುವುದು ಕಷ್ಟವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಶಿಕ್ಷಕರ ಸಮಸ್ಯೆ ಕುರಿತು ಇಲಾಖೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.