ಶ್ರೀನಿವಾಸಪುರ: ಪಟ್ಟಣದ ಇಂದ್ರಾ ಭವನ್ ವೃತ್ತದ ಸಮೀಪ ಅನಧಿಕೃತ ಅಂಗಡಿ – ಚರ್ಚಿಸುವುದರ ಮೂಲಕ ಬಗೆಹರಿಸಲಾಯಿತು

ಶ್ರೀನಿವಾಸಪುರ: ಪಟ್ಟಣದ ಇಂದ್ರಾ ಭವನ್ ವೃತ್ತದ ಸಮೀಪ ಗುರುವಾರ ಅನಧಿಕೃತವಾಗಿ ಇಡಲಾಗಿದ್ದ ಪೆಟ್ಟಿಗೆ ಅಂಗಡಿ ವಿವಾದವನ್ನು, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರೊಂದಿಗೆ ಚರ್ಚಿಸುವುದರ ಮೂಲಕ ಬಗೆಹರಿಸಲಾಯಿತು.
ಪಟ್ಟಣದ ಅಮರಾವತಿ ಎಂಬುವವರಿಗೆ ಬಸ್ ನಿಲ್ದಾಣದ ಪಾಸಲೆಯಲ್ಲಿ ಅಂಗಡಿ ತೆರೆಯು ಬಗ್ಗೆ ಪುರಸಭೆ ಪ್ರಸ್ತಾವನೆಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು ಎಂದು ಹೇಳಲಾಗಿದ್ದು, ಅವರ ಕಡೆಯವರು ಪುರಸಭೆ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ತಂದಿಟ್ಟಿದ್ದರು. ಆ ಸ್ಥಳದಲ್ಲಿ ಯೋಗಿ ನಾರೇಯಣ ಯತೀಂದ್ರರ ಪ್ರತಿಮೆ ಸ್ಥಾಪಿಸಲು ಹಾಗೂ ವೃತ್ತಕ್ಕೆ ನಾರೇಯಣ ಯಂತ್ರೀಂದ್ರರ ಹೆಸರಿಡಲು ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ಹಾಗಾಗಿ ಅಲ್ಲಿ ಅಂಗಡಿ ತೆರೆಯಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ಪುರಸಭೆ ಕಚೇರಿ ಆವರಣದಲ್ಲಿ ಇಟ್ಟಿದ್ದರು. ಆದರೆ ಕೆಲವರು ಪುರಸಭೆ ಕ್ರಮ ವಿರೋಧಿಸಿ, ಪೆಟ್ಟಿಗೆ ಅಂಗಡಿಯನ್ನು ಮತ್ತೆ ಪುರಸಭೆ ಆವರಣದಿಂದ ಈ ಹಿಂದೆ ಇಡಲಾಗಿದ್ದ ಸ್ಥಳಕ್ಕೆ ಸ್ಥಳಾಂತರಿಸಿರು.
ಅದರಿಂದ ಸಿಟ್ಟುಗೊಂಡ ಪುರಸಭಾ ಸದಸ್ಯ ಭಾಸ್ಕರ್ ಮುಖ್ಯಾಧಿಕಾರಿಯನ್ನು ಭೇಟಿಯಾಗಿ, ಆ ಸ್ಥಳದಲ್ಲಿ ಈಗಾಗಲೆ ಪುರಸಭೆ ಕೈಗೊಂಡಿರುವ ನಿರ್ಧಾರದಂತೆ ಯೋಗಿ ನಾರೇಯಣ ಯಂತ್ರೀಂದ್ರರ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಬೇಕು ಆಗ್ರಹಿಸಿದರು. ಕೆಲವು ಜೆಡಿಎಸ್ ಮುಖಂಡರು ಮುಖ್ಯಾಧಿಕಾರಿ ಕಚೇರಿ ಪ್ರವೇಶಿಸಿ ಅಂಗಡಿ ಇಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಆಗ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಇ.ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಕಾನೂನು ಮೀರದಂತೆ ನಡೆದುಕೊಳ್ಳಲು ಸೂಚಿಸಿದರು. ಆಗ ನಾರೇಯಣ ಯತೀಂದ್ರರ ಪುತ್ಥಳಿ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಆದರೆ ಅಂಗಡಿ ಇಡಲು ಸ್ಥಳ ನೀಡಬೇಕು ಎಂದು ಜೆಡಿಎಸ್ ಮುಖಂಡರು ತಿಳಿಸಿದರು. ಆಗ ಪರಿಸ್ಥಿತಿ ತಿಳಿಯಾಯಿತು. ಅಂಗಡಿ ತೆರವುಗೊಳಿಸಲಾಯಿತು.
ಪುರಸಭಾ ಸದಸ್ಯ ಭಾಸ್ಕರ್, ಮುಖಂಡರಾದ ರವಿ, ಜನನ್ನಾಥ್ ಚರ್ಚೆಯಲ್ಲಿ ಭಾಗವಹಿಸಿದ್ದರು.