ಶ್ರೀನಿವಾಸಪುರ: 18 ವರ್ಷ ತುಂಬಿದ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಈ ನಿಟ್ಟಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಸದಸ್ಯರು ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು, ನಿಸ್ಪಕ್ಷಪಾತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ ಮಾತನಾಡಿ, ವಿದ್ಯಾಥರ್ಿಗಳು ಪ್ರಜಾಪ್ರಭುತ್ವದ ಮಹತ್ವ ಅರಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಮಹತ್ವದ ಸ್ಥಾನವಿದೆ. ಬಹುಮತಕ್ಕೆ ಹೆಚ್ಚಿನ ಮಾನ್ಯತೆ ಇದೆ. ಉತ್ತಮ ಜನಪ್ರತಿನಿಧಿಯ ಆಯ್ಕೆ ಮತದಾರರ ಅಭಿಪ್ರಾಯವನ್ನು ಅವಲಂಬಿಸಿರುತ್ತದೆ. ವಿದ್ಯಾಥರ್ಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ ಮತದಾನದ ಮಹತ್ವ ಕುರಿತು ಮಾತನಾಡಿದರು. ತಿಪ್ಪಣ್ಣ ಮತದಾನ ಕುರಿತು ತರಬೇತಿ ನೀಡಿದರು.
ಪ್ರಾಂಶುಪಾಲ ಸಿ.ಆರ್.ಪ್ರಾಣೇಶ್, ಮತದಾರರ ಸಾಕ್ಷರತಾ ಕ್ಲಬ್ ಸಂಯೋಜನಾಧಿಕಾರಿ ಜಿ.ಕೆ.ನಾರಾಯಣಸ್ವಾಮಿ, ಉಪನ್ಯಾಸಕಾರಾದ ವಾಸು, ಎನ್. ಗೋಪಿನಾಥ್, ಎನ್. ಶಂಕರೇಗೌಡ, ಗೋಪಾಲನ್, ವೇಣುಗೋಪಾಲ್, ರಘುಪತಿ, ಲಕ್ಷ್ಮಿದೇವಿ, ಪಿ.ಎಸ್. ಮಂಜುಳ, ವೀಣಾ, ಸುಮ, ಮಾಧವಿ, ಲತಾ ಇದ್ದರು.