ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅರಣ್ಯ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಮರಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ತೆರವುಗೊಳಿಸಲಾದ ಪ್ರದೇಶದ ಸುತ್ತ ಕಂದಕ ನಿರ್ಮಾಣ ಹಾಗೂ ಮಾವಿನ ಮರ ತೆರವುಗೊಳಿಸಿದ ಪ್ರದೇಶದಲ್ಲಿ ನೇರಳೆ, ಆಲ, ಬಿದಿರು, ಶ್ರೀಗಂಧ, ಬೇವು ಮತ್ತಿತರ ಜಾತಿಯ ಗಿಡ ನೆಡುವ ಕಾರ್ಯ ಭರದಿಂದ ಸಾಗಿತ್ತು. ಅರಣ್ಯ ಇಲಾಖೆ ನೇಮಿಸಿಕೊಂಡಿರುವ ದೊಡ್ಡ ಸಂಖ್ಯೆಯ ಕೂಲಿ ಕಾರ್ಮಿಕರು ಗಿಡ ನೆಟ್ಟು ನೀರು ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.
‘ಇಂದು 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ನೆನ್ನೆ 150 ಎಕರೆ ಒತ್ತುವರಿ ತೆರವುಗೊಳಿಸಲಾಗಿತ್ತು. ಈವರೆಗೆ ಒಟ್ಟು 20 ಒತ್ತುವರಿದಾರರಿಗೆ ಸೇರಿದ 270 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ 15 ದಿನಗಳ ಕಾಲ ಒತ್ತುವರಿ ತೆರವುಗೊಳಿಸಲಾಗಿರುವ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಸುತ್ತಲೂ ಕಂದಕ ನಿರ್ಮಿಸಲಾಗುವುದು. ಅನಂತರ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಕೆ.ಮಹೇಶ್ ತಿಳಿಸಿದರು.
ಪಟ್ಟಣದಿಂದ ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದ ಜನರನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹೊರಗೆ ಕಳಿಸಿದರು. ಕಾರ್ಯಾಚರಣೆಗೆ ಯಾವುದೇ ತೊಡಕು ಉಂಟಾಗದಂತೆ ಎಚ್ಚರ ವಹಿಸಲಾಗಿತ್ತು.