ಶ್ರೀನಿವಾಸಪುರ: ವಿದ್ಯಾರ್ಥಿಗಳು ವಿದ್ಯುತ್ ಸುರಕ್ಷತೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕುರಿತು ನಿರ್ಲಕ್ಷ್ಯ ವಹಿಸಬಾರದು ಎಂದು ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪಿ.ರಾಮತೀರ್ಥ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಸ್ಕಾಂ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವಿದ್ಯುತ್ ಸುರಕ್ಷತೆ ಕುರಿತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳಿಗೆ ಜಾನುವಾರು ಕಟ್ಟದಂತೆ ತಿಳಿಸಬೇಕು. ಯಾವುದೇ ಕಾರಣದಿಂದ ವಿದ್ಯುತ್ ತಂತಿಗಳು ತುಂಡಾಗಿ ಕೆಳಗೆ ಬಿದ್ದಿದ್ದಲ್ಲಿ ಮುಟ್ಟಲು ಹೋಗಬಾರದು. ಆ ಕುರಿತು ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತರಬೇಕು ಎಂದು ಹೇಳಿದರು.
ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪಡೆಯುವುದು ಎರಡನೆಯದು. ಬಹುಮಾನ ಬರದ ವಿದ್ಯಾರ್ಥಿಗಳು ಬೇಸರ ಪಡದೆ, ಮುಂದೆ ಉತ್ತಮ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಎಂಜಿನಿಯರ್ಗಳಾದ ನಂಜುಂಡೇಶ್ವರ, ಸುದರ್ಶನ್, ಬಿಆರ್ಸಿ ಸಂಯೋಜಕಿ ಕೆ.ಸಿ.ವಸಂತ ಇದ್ದರು.