

ಶ್ರೀನಿವಾಸಪುರ: ತಾಲ್ಲೂಕಿನ ಶಿವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜನರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಾಲ್ಲೂಕಿನ ಅರಿಕೆರೆಯಲ್ಲಿ ಶಿವರಾತ್ರಿ ಪ್ರಯುಕ್ತ ಶನಿವಾರ ನಾಗನಾಥೇಶ್ವರಸ್ವಾಮಿ ರಥೋತ್ಸವ ಏರ್ಪಡಿಸಲಾಗಿತ್ತು. ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರಿತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮಗಳಿಂದ ಎತ್ತಿನ ಗಾಡಿಗಳಲ್ಲಿ ತಂದಿದ್ದ ಪಾನಕ ಕುಡಿದು ದಣಿವು ತೀರಿಸಿಕೊಂಡರು. ದೇವಾಲಯ ಅಭಿವೃದ್ಧಿ ಸಮಿತಿ ಹಾಗೂ ಸಮಾಜ ಸೇವಾ ಸಂಸ್ಥೆಗಳಿಂದ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.
ರಾಯಲ್ಪಾಡ್ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವತಾ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕಿನ ದೂರ ದೂರದ ಗ್ರಾಮಗಳಿಂದ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ಗ್ರಾಮಗಳಿಂದಲೂ ಜನರು ಬಂದು ದೇವರ ದರ್ಶನ ಪಡೆದರು. ದರ್ಶನ ಪಡೆದವರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ಶ್ರೀನಿವಾಸಪುರದ ನಗರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ಅಂಗವಾಗಿ ಲಿಂಗಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಶಂಕರ ಮಠ ಸಮೀಪದ ಶಿವಾಲಯದಲ್ಲಿ ಕುಂಭಾಭಿಷೇಕ ಏರ್ಪಡಿಸಲಾಗಿತ್ತು. ವಿಶೇಷ ಪೂಜೆ ನಡೆಯಿತು. ಶಿರಿಡಿ ಸಾಯಿಬಾಬ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ವತಿಯಿಂದ ಶಿವೋತ್ಸವ ಏರ್ಪಡಿಸಲಾಗಿತ್ತು. ಪಟ್ಟನದ ಮುಖ್ಯ ರಸ್ತೆಗಳಲ್ಲಿ ಶಿವೋತ್ಸವ ಮೆರವಣಿಗೆ ಏರ್ಪಡಿಸಲಾಗಿತ್ತು. ದಳಸನೂರಿನ ಶಿವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ದೇವರ ದರ್ಶನ ಪಡೆದರು. ತಾಲ್ಲೂಕಿನ ಬಹುತೇಕ ಗ್ರಾಮಗಳ ಸ್ಥಳೀಯ ದೇವಾಲಯಗಳಲ್ಲಿ ಪೂಜೆ, ಆಭಿಷೇಕ, ಏರ್ಪಡಿಸಲಾಗಿತ್ತು.

