ಶ್ರೀನಿವಾಸಪುರ: ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ಪಟ್ಟಣದ ಎಸ್‍ಎಫ್‍ಎಸ್ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಸಿದ್ದ ಶಾಲಾ ಬೆಳ್ಳಿ ಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕು ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಎಸ್‍ಎಫ್‍ಎಸ್ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೊದಲು ಬಂದಿದೆ ಎಂದು ಹೇಳಿದರು.
ಉತ್ತಮ ಫಲಿತಾಂಶ ಬರಬೇಕಾದರೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದೃಢ ನಿರ್ಧಾರ ಹಾಗೂ ಪರಿಶ್ರಮ ಇದ್ದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸೇಲ್ಸ್ ಸಂಗೀತಾ ಅಕಾಡೆಮಿ ನಿರ್ದೇಶಕ ಡಾ. ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಣ ಎಲ್ಲವನ್ನೂ ಕೊಡುವ ಕಾಮಧೇನು. ಅದನ್ನು ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಬೇಕು. ಗುರಿ ಸಾಧಿಸಬೇಕು ಎಂದು ಹೇಳಿದರು.
ವಿಭಾಗೀಯ ವ್ಯವಸ್ಥಾಪಕ ಥಾಮಸ್ ಕಲಾರಿಪರಂಬಿಲ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎ.ಈಶ್ವರ್, ಶಿಕ್ಷಕಿಯರಾದ ರೆಡ್ಡಮ್ಮ, ಪವಿತ್ರ, ಶಿಕ್ಷಕರಾದ ಪ್ರವೀಣ್, ಪವನ್ ಕುಮಾರ್,ರಾಜಣ್ಣ, ಪುರುಷೋತ್ತಮ್, ವಂದನೀಯಸ್ವಾಮಿ ಸಿರಿಯಾಕ್, ಫಾದರ್ ಪ್ರಶಾಂತ್ ಪ್ರಕಾಶ್, ಡಾ. ಆಂಥೋನಿಸ್ವಾಮಿ. ಆರೋಗ್ಯ ಮೇರಿ ಇದ್ದರು.