ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು . ಆಸ್ಪತ್ರೆಯ ವಿವಿಧ ಘಟಕಗಳು ಹಾಗೂ ಒಳ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು , ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು . ರೋಗಿಗಳಿಗೆ ಚೆನ್ನಾಗಿ ಶುಚಿಗೊಳಿಸಿದ ಬಟ್ಟೆಗಳನ್ನು ನೀಡಬೇಕು ಎಂದು ಹೇಳಿದರು . ಆಸ್ಪತ್ರೆ ಶುಚಿತ್ವ , ನಿರ್ವಹಣೆ ಮತ್ತು ಸಿಬ್ಬಂದಿಯ ವೈದ್ಯಕೀಯ ಸೇವೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು , ಆಸ್ಪತ್ರೆ ಮುಂದೆ ವಾಹನಗಳ ನಿಲುಗಡೆ ಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ . ಆದ್ದರಿಂದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡಲು ಪೊಲೀಸ್ ಇಲಾಖೆ ನೆರವು ಪಡೆಯುಂತೆ ಸೂಚಿಸಿದರು . ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ . ಕುಡಿಯುವ ನೀರಿನ ಸಮಸ್ಯೆ ಇದೆ . ಐಸಿಯು ಘಟಕ ಇದೆಯಾದರೂ , ತಜ್ಞ ವೈದ್ಯರಿಲ್ಲ ಎಂದು ವೈದ್ಯರು ನ್ಯಾಯಾಧೀಶರಿಗೆ ತಿಳಿಸಿದರು . ಅದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು .
ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಡಾ . ಉಮಾಶಂಕರ್ , ಡಾ . ದಿವಾಕರ್ , ಡಾ . ಕಮಲಮ್ಮ , ಡಾ . ನಿರಂಜನ್ , ಸಿಬ್ಬಂದಿ ಪ್ರಕಾಶ್ , ಲೀಡಿಯಾ , ಔಷಧಿಕಾರ ಮೊಹಮ್ಮದ್ ಅಲಿ , ಸೈಯದ್ , ಉಷಾ , ಇದ್ದರು .