ಶ್ರೀನಿವಾಸಪುರ: ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಮಹಮದ್ ಗೊರವನಕೊಳ್ಳ ಹೇಳಿದರು.
ಪಟ್ಟಣದ ವೃದ್ಧಾಶ್ರಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ವೃದ್ಧಾಶ್ರಮದ ನಿವಾಸಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ವೃದ್ಧರನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ತಂದೆ ತಾಯಿ ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸುತ್ತಾರೆ. ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಮಕ್ಕಳ ಪಾಲನೆ ಮಾಡುತ್ತಾರೆ. ಅವರ ಉತ್ತಮ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ. ಆದರೆ ಮಕ್ಕಳು ಮುದಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಮಕ್ಕಳಿಂದ ತಿರಸ್ಕರಿಸಲ್ಪಟ್ಟ ಹಿರಿಯರು ಅನಾಥಾಶ್ರಮದಲ್ಲಿ ಜೀವನ ಕಳೆಯುತ್ತಿದ್ದಾರೆ. ಅದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.
ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ದಾನಿಗಳ ನೆರವಿನ ಅಗತ್ಯವಿದೆ. ಬೇರೆ ಬೇರೆ ಕಾರಾಣಗಳಿಂದ ಒಬ್ಬಂಟಿಯಾದ ಹಿರಿಯ ಜೀವಗಳಿಗೆ ಗೌರವಯುತ ಜೀವನ ಕಟ್ಟಿಕೊಡಬೇಕು. ಅದಕ್ಕೆ ಸಮಾಜ ಸೇವಾ ಸಂಸ್ಥೆಗಳು ಮತ್ತು ಸಮಾಜ ಮುಖಿ ವ್ಯಕ್ತಿಗಳು ನೆರವಿನ ಹಸ್ತ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ನಾಗರಾಜ್, ನಾರಾಯಣಸ್ವಾಮಿ, ಶಿವಕುಮಾರ್, ಸತೀಶ್ ಇದ್ದರು.