ಶ್ರೀನಿವಾಸಪುರ: ಹೈನುಗಾರಿಕೆ ಅಭಿವೃದ್ಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಹೆಬ್ಬಟ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಸಮುದಾಯಕ್ಕೆ ಕ್ಷೀರೋತ್ಪಾದನೆ ಜೀವನಾಡಿಯಾಗಿದೆ. ಗ್ರಾಮೀಣ ಪ್ರದೇಶದ ಎಲ್ಲ ಸಮುದಾಯದ ಜನರ ಆರ್ಥಿಕಾಭಿವೃದ್ಧಿ ಹಾಲಿನ ಉತ್ಪಾದನೆ ಮೇಲೆ ನಿಂತಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಈಗ ನೀಡಲಾಗುತ್ತಿರುವ ರೂ.50 ಸಾವಿರ ಬಡ್ಡಿರಹಿತ ಸಾಲದ ಜತೆಗೆ, ಹೆಚ್ಚುವರಿಯಾಗಿ ಬಡ್ಡಿಸಹಿತ ಸಾಲವಾಗಿ ರೂ.50 ಸಾವಿರ ನೀಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ರೂ.1 ಲಕ್ಷ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಬಡವರಿಗೆ ಅಕ್ಕಿ ನೀಡಿದರು. ಅದನ್ನು ಜನರು ಮರೆಯುವಂತಿಲ್ಲ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಮಾತನಾಡಿ, ತಾಲ್ಲೂಕಿನಲ್ಲಿ 168 ಹಾಲು ಉತ್ಪಾದಕರ ಸಂಘಗಳಿವೆ. ಆ ಪೈಕಿ 11 ಮಹಿಳಾ ಸಹಕಾರ ಸಂಘಗಳಿವೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಉಪ ಕಚೇರಿ ಉಪ ವ್ಯವಸ್ಥಾಪಕ ಮುನಿರಾಜು, ಸ್ಥಳೀಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಅನಂತಕುಮಾರ್, ಮುಖಂಡರಾದ ಸಂಜಯ್‍ರೆಡ್ಡಿ, ಗೋಪಾಲರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಎಚ್.ಕೆ.ಸುಬ್ರಮಣಿರಾವ್, ಎಚ್.ಜಿ.ವಿಜಯಕುಮಾರ್, ವೆಂಕಟರೆಡ್ಡಿ, ನಾರಾಯಣರೆಡ್ಡಿ, ವಿನಾಯಕ ಕುಮಾರ್ ಇದ್ದರು.