ಶ್ರೀನಿವಾಸಪುರ: ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಎಂಜಿ ರಸ್ತೆಯಲ್ಲಿ ಅವರೆ ಕಾಯಿ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಂಜಿ ರಸ್ತೆಯಲ್ಲಿ ನಡೆಯುತ್ತಿದ್ದ ಅವರೆಕಾಯಿ ವಹಿವಾಟು ನಿಲ್ಲಿಸಲು ಹೋದ ಪೊಲೀಸ್ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ರಸ್ತೆಯ ಎರಡೂ ಕಡೆ ದೊಡ್ಡ ಮಟ್ಟದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ಅವರೆಕಾಯಿ ವಹಿವಾಟು ನಡೆಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದಾಗಿ ತಿಳಿಸಿ ವ್ಯಾಪಾರಿಗಳ ಮನವೊಲಿಸಲಾಯಿತು.
ಪುರಸಭೆ ಕಚೇರಿ ಸಭಾಂಗಣದಲ್ಲಿ ವ್ಯಾಪಾರಿಗಳ ಸಭೆ ನಡೆಸಲಾಯಿತು. ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಪಟ್ಟಣದ ನಾಗರಿಕೆ ಹಿತದೃಷ್ಟಿಯಿಂದ ಹಾಗೂ ಸುಗಮ ಸಂಚಾರಕ್ಕಾಗಿ ಮಂಡಿ ಮಾಲೀಕರು ಅವರೆ ಕಾಯಿ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಿದರು. ಮಾರುಕಟ್ಟೆ ನಿಯಮ ಪಾಲಿಸುವಂತೆ ಸೂಚಿಸಿದರು.
ವ್ಯಾಪಾರಿಗಳು ಜ.6 ರಿಂದ ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲು ಸಮ್ಮತಿಸಿದರು. ಅವರೆಕಾಯಿ ವಹಿವಾಟು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ರಾಜ್ಯ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದ್ದರು. ವಹಿವಾಟು ಸ್ಥಳಾಂತರ ತಡವಾದರೆ ತಾಲ್ಲೂಕಿನ ಶಾಸಕರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮನೆಗಳ ಮುಂದೆ ಪ್ರತಿಭಟನೆ ನಡೆಸುವ ಬೆದರಕೆ ಹಾಕಿದ್ದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಎಪಿಎಂಸಿ ಕಾರ್ಯದರ್ಶಿ ಉಮಾ, ಪುರಸಭೆ ಅಧಿಕಾರಿಗಳಾದ ಕೆ.ಜಿ.ರಮೇಶ್, ವಿ.ನಾಗರಾಜ್, ಎನ್.ಶಂಕರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳಾದ ಜಯರಾಂ, ರಮಾದೇವಿ, ಎಂ.ಡಿ.ನಾರಾಯಣಪ್ಪ ಇದ್ದರು.