ಶ್ರೀನಿವಾಸಪುರ: ಬಂಧಿಸಲಾಗಿರುವ ರೈತ ಮುಖಂಡರು ಹಾಗೂ ರೈತರನ್ನು ಬಿಡುಗಡೆ ಮಾಡುವಂತೆ ಸರ್ಕಾರನ್ನು ಆಗ್ರಹಿಸಿ, ಸಂಯುಕ್ತ ಹೋರಾಟ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಭಟನೆ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರೈತರ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಕೆಪಿಆರ್ಎಸ್ ರಾಜ್ಯಾಧ್ಯಕ್ಷ ಜೆ.ಸಿ.ಬೈಯ್ಯಾರೆಡ್ಡಿ, ಭೂ ಸಂತ್ರಸ್ತ ಹೋರಾಟ ಸಮಿತಿ ಸಂಚಾಲಕ ಚಂದ್ರತೇಜಸ್ವಿ, ದಲಿತ ಮುಖಂಡ ಶ್ರೀನಿವಾಸ್ ಅವರನ್ನು ಬಿಜೆಪಿ ಸರ್ಕಾರದ ಕುತಂತ್ರದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತ 1700 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನೀತಿ ವಿರುದ್ಧ 135 ದಿನಗಳಿಂದ ಧರಣಿ ನಡೆಸಲಾಗುತ್ತಿತ್ತು. ಜನಪರ ಸಂಘಟನೆಗಳ ನೇತೃತ್ವ ವಹಿಸಿದ್ದಕ್ಕಾಗಿ ಮುಖಂಡರನ್ನು ಬಂಧಿಸಲಾಗಿದೆ. ಬಂಧಿತರನ್ನು ಧೂಳು ತುಂಬಿದ ಗೋಡನ್ ಒಂದರಲ್ಲಿ ಇರಿಸಿದ್ದಾರೆ ಎಂದು ಹೇಳಿದರು.
ಸರ್ಕಾರದ ಧೋರಣೆ ಖಂಡಿಸಿ, ಹೋರಾಟ ನಿರತ ರೈತರು ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂದರ್ಭದಲ್ಲಿ ಒಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸರ್ಕಾರ ಹೋರಾಟ ಧಮನಿಸಲು ಮುಖಂಡರ ಬಂಧನ ಮಾಡಿದೆ ಎಂದು ಹೇಳಿದರು.
ಜಿಲ್ಲಾ ಕೆಪಿಆರ್ಎಸ್ ಘಟಕದ ಉಪಾಧ್ಯಕ್ಷ ಪಾತಕೋಟೆ ನವೀನ್ ಕುಮಾರ್ ಮಾತನಾಡಿ, ರೈತ ಮುಖಂಡರನ್ನು ಅಕ್ರಮವಾಗಿ ಬಂಧಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರ ಮೇಲೆ ಹೂಡಲಾಗಿದೆ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಫಲವತ್ತಾದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಶಿರಸ್ತೇದಾರ್ ಮನೋಹರ ಮಾನೆ ಅವರಿಗೆ ನೀಡಲಾಯಿತು.
ಮುಖಂಡರಾದ ಎನ್.ವೀರಪ್ಪರೆಡ್ಡಿ, ಎನ್.ಜಿ.ಶ್ರೀರಾಮರೆಡ್ಡಿ, ಬಿ.ಎಸ್.ಸೈಯದ್ ಫಾರೂಕ್, ಅಸ್ಲಂಪಾಷ, ಆರ್.ವೆಂಕಟೇಶ್, ವೆಂಕಟಲಕ್ಷ್ಮಮ್ಮ ಮತ್ತಿತರರು ಇದ್ದರು.