ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಗಮದ ಮುಖ್ಯಗುರಿಯಾಗಿದೆ ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಚ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಶಾಖಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 67ನೇ ಎಲ್‍ಐಸಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗು ಎಲ್‍ಐಸಿ ಸೌಲಭ್ಯ ಒದಗಿಸಬೇಕು. ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಜನರ ಆರ್ಥಿಕ ಸ್ಥಿತಿಗೆ ಅನುಗುಣವಾದ ಪಾಲಿಸಿ ಮಾಡಿಸಬೇಕು ಎಂದು ಹೇಳಿದರು.
ಎಲ್‍ಐಸಿ ವ್ಯವಹಾರ ಪಾರದರ್ಶಕವಾಗಿದ್ದು, ನಂಬಲು ಅರ್ಹವಾಗಿದೆ. ಆದ್ಧರಿಂಲೇ ಜನರು ಹಲವು ದಶಗಳಿಂದ ಈ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಹಣ ತೊಡಗಿಸುತ್ತಿದ್ದಾರೆ. ಆದ್ದರಿಂದ ಎಲ್‍ಐಸಿಯಲ್ಲಿನ ವಿವಿಧ ಯೋಜನೆಗಳನ್ನು ಪರಿಚಯಿಸುವ ಹೊಣೆ ಪ್ರತಿನಿಧಿಗಳ ಮೇಲಿದೆ. ತಾವು ಬೆಳೆಯುವುದರೊಂದಿಗೆ ಸಂಸ್ಥೆ ಬೆಳೆಯಲು ಶ್ರಮಿಸಬೇಕು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಮಾತನಾಡಿ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಎಲ್‍ಐಸಿ ಪಾತ್ರ ಹಿರಿದು. ಸಾರ್ವಜನಿಕರ ಆರ್ಥಿಕಾಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ಎಲ್‍ಐಸಿ ಪ್ರತಿನಿಧಿಗಳು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ವಿ.ಕುಲಕರ್ಣಿ ಮಾತನಾಡಿ, ಎಲ್‍ಐಸಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ತನ್ನ ಕಾರ್ಯ ವೈಖರಿಯಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ರೂ.45 ಲಕ್ಷ ಕೋಟಿ ಶಾಶ್ವತ ನಿಧಿ ಮೀಸಲಿರಿಸಿದೆ ಎಂದು ಹೇಳಿದರು.
ಉಪ ವ್ಯವಸ್ಥಾಪಕ ಡಿ.ರವಿಶಂಕರ್, ಶ್ರೀನಿವಾಸ್, ಲಿಖಿತ್ ಕುಮಾರ್ ಹಾಗೂ ಪ್ರತಿನಿಧಿಗಳು ಇದ್ದರು.