

ಶ್ರೀನಿವಾಸಪುರ: ತಾಲ್ಲೂಕಿಗೆ ಮಂಗಳವಾರ ಭೇಟಿ ನೀಡಿದ್ದ ಐಎಎಸ್ ಅಧಿಕಾರಿ ವಿನಾಯಕ್ ಘೋರ್ಪಡೆ, ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಸುರಿಯುತ್ತಿದ್ದ ಮಳೆ ಮಧ್ಯೆ ತಾಲ್ಲೂಕಿನ ಕಾಡುದೇವಂಡಹಳ್ಳಿ ಗ್ರಾಮದ ಸಮೀಪ ಧನಂಜಯಗೌಡ ನರೇಗಾ ಯೋಜನೆಯಡಿ ಬೆಳೆಸಿರುವ ಡ್ರ್ಯಾಗನ್ ಫ್ರೂಟ್ ತೋಟಕ್ಕೆ ಭೇಟಿ ನೀಡಿ ಪರಿಶೀಲಸಿದರು. ರೈತರು ವಿಶೇಷ ಕಾಳಜಿ ವಹಿಸಿ ಬೆಳೆಸಿರುವ ತೋಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಡ್ಲಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ವೀಕ್ಷಿಸಿದರು. ಕಶೆಟ್ಟಿಪಲ್ಲಿ ಗ್ರಾಮದ ಹೊರವಲಯದಲ್ಲಿ ರೂ.5ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಸ್ಮಶಾನ ಅಭಿವೃದ್ಧಿ ಕಾಮಗಾರಿ, ರೂ.4 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಗೋಟುಂಟೆ ನಿರ್ಮಾಣ ಕಾಮಗಾರಿ, ರೂ.42 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಾನುವಾರು ನೀರಿನ ತೊಟ್ಟಿ ವೀಕ್ಷಿಸಿದರು.
ಆಲವಟ್ಟ ಗ್ರಾಮದ ಸಮೀಪ ರೂ.13.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಜೀವಕ ಶೆಡ್, ಪಾತಪಲ್ಲಿ ಗ್ರಾಮದಲ್ಲಿ ರೂ.8 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಶಾಲಾ ಕೊಠಡಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಜನಿಯರ್‍ಗಳು ನರೇಗಾ ಕಾಮಗರಿಗಳ ಗುಣಮಟ್ಟ ಕೆಡದಂತೆ ಎಚ್ಚರ ವಹಿಸಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಹಣ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಮಂಜುನಾಥಸ್ವಾಮಿ, ಎಡಿಪಿಸಿ ಸತೀಶ್, ಎಂಜಿನಿಯರ್‍ಗಳಾದ ಚೇತನ್, ಟಿ.ಸಿ.ರಾಜು ಇದ್ದರು.