

ಶ್ರೀನಿವಾಸಪುರ: ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ಸರ್ವಕಾಲಿಕ ಮಾನವೀಯ ಮೌಲ್ಯವಾಗಿ ಮುಂದುವರಿದಿದೆ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಗಾಂಧೀಜಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜಗತ್ತಿನಲ್ಲಿ ಹೆಚ್ಚುತ್ತಿರುವ ಹಿಂಸಾ ವಾತಾವರಣ ಮಾನವ ಕುಲಕ್ಕೆ ಬೆದರಿಕೆ ಒಡ್ಡಿದೆ. ಇಂಥ ಪರಿಸ್ಥಿತಿಯಲ್ಲಿ ಗಾಂಧೀಜಿ ಅವರ ತತ್ವ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ರಕ್ಷಣೆಯಲ್ಲಿ ಸೈನಿಕರು ಹಾಗೂ ರೈತರ ಪಾತ್ರ ಎತ್ತಿಹಿಡಿದ ಮಾಜಿ ಪ್ರಧಾನಿ ಹಾಗೂ ಸ್ವಾತಂತ್ರ್ಯ ಯೋಧ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ದೇಶ ವಾಸಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಹಾಗೂ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ಚೇತನಗಳು ನಡೆದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಅವರ ತ್ಯಾಗ ಹಾಗೂ ಮಾನವೀಯ ಪ್ರಜ್ಞೆ ಸರ್ವಕಾಲಿಕ ಮಾದರಿಯಾಗಿದೆ. ಯುವ ಸಮುದಾಯ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ಶ್ರಮದಾನದ ಮಹತ್ವ ಅರಿಯಬೇಕು. ಶ್ರಮದಾನದ ಮೂಲಕ ಸ್ವಚ್ಛ ಪರಿಸರ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ಉಪ ತಹಶೀಲ್ದಾರ್ ಕೆ.ಎಂ.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಹರಿ, ಅನ್ವರ್ ಬೇಗ್, ನಾಗರಾಜ್ ಇದ್ದರು.