

ಶ್ರೀನಿವಾಸಪುರ: ಪಟ್ಟಣದಲ್ಲಿ ಪಕ್ಷಾತೀತವಾಗಿ ಎಲ್ಲ ವಾರ್ಡ್‍ಗಳ ಅಭಿವೃದ್ಧಿಗೆ ಒತ್ತುನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸರ್ವಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗುವುದು. ರಸ್ತೆ, ಚರಂಡಿ ದುರಸ್ತಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಮಾತನಾಡಿ, ಸರ್ವ ಸದಸ್ಯರ ಸಭೆಗೆ ಆದಾಯ ಮತ್ತು ಖರ್ಚಿನ ಮಾಹಿತಿ ನೀಡಬೇಕು. ಹಾಗೆ ಮಾಡದೆ ಸಭೆ ನಡೆಸುವುದು ಸರಿಯಾದ ಕ್ರಮವಲ್ಲ. ಪುರಸಭೆಯಲ್ಲಿ ಜನನ ಮರಣ ಮಾಹಿತಿ ಸಮರ್ಪಕವಾಗಿಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಿರು. ವಿರೋಧ ಪಕ್ಷದ ಸದಸ್ಯರು ಅದಕ್ಕೆ ಧ್ವನಿಗೂಡಿಸಿದರು. ಆ ಕುರಿತು ಕ್ರಮ ಕೈಗೊಳ್ಳುವ ಭರವಸೆ ದೊರೆತ ಮೇಲೆ ಸಭೆ ಮುಂದುವರಿಯಿತು.
ಪುರಸಭೆ ಕಚೇರಿ ಮುಂದೆ ಪಾರ್ಕ್ ನಿರ್ಮಾಣ, ಎಲ್ಲ ವಾರ್ಡ್‍ಗಳಿಗೆ ವಾರ್ಡ್ ಸಂಖ್ಯೆ ನೀಡಿಕೆ, ಪಾರ್ಕಿಂಗ್ ಟೈಲ್ಸ್ ಅಳವಡಿಕೆ, ಪುರಸಭೆ ಸಿಬ್ಬಂದಿ ವಿಶ್ರಾಂತಿ ಗೃಹಗಳ ನಿರ್ಮಾಣ, ನೀರು ಸರಬರಾಜಿಗೆ ಹೊರಗುತ್ತಿಗೆ ನೀಡಿಕೆ, ಪೌರ ಕಾರ್ಮಿಕರಿಗೆ ಬೆಳಿಗಿನ ಉಪಹಾರ ನೀಡಿಕೆ, ಘನ ತ್ಯಾಜ್ಯ ನಿರ್ವಹಣೆ ಮುಂತಾದ 27 ಅಂಶಗಳಿಗೆ ಅನುಮೋದನೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ನಿರೀಕ್ಷಕ ವಿ.ನಾಗರಾಜ್, ಎಂಜಿನಿಯರ್ ಶ್ರೀನಿವಾಸ್, ಸಂತೋಷ್, ಸುರೇಶ್ ಇದ್ದರು.