ಶ್ರೀನಿವಾಸಪುರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆರೋಗ್ಯ ರಕ್ಷಣಾ ಕಾರ್ಡ್ ವಿತರಣೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ      (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)

ಶ್ರೀನಿವಾಸಪುರ: ಫಲಾನುಭವಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿತರಿಸುವ ಆರೋಗ್ಯ ರಕ್ಷಣಾ ಕಾರ್ಡ್ ಪ್ರಯೋಜನ ಪಡೆದು, ಆರೋಗ್ಯ ಉತ್ತಮಪಡಿಸಿಕೊಳ್ಳಬೇಕು ಎಂದು ಮುಖಂಡ ಸಂಜಯ್ ರೆಡ್ಡಿ ಹೇಳಿದರು.


ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಬಡವರಿಗೆ ವರದಾನವಾಗಿದೆ. ಅದೆಷ್ಟೋ ಜನರು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.


ಯೋಜನೆಯ, ಯೋಜನಾ ಮಂಡಳಿ ನಿರ್ದೇಶಕ ಮುರಳಿಧರಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 35 ಸಾವಿರ ಸ್ವಸಹಾಯ ಸಂಘಗಳಿವೆ. ಸಂಘದ ಸದಸ್ಯರ ಹಾಗೂ ಅಗತ್ಯ ಇರುವ ಇತರರ ಆರೋಗ್ಯ ರಕ್ಷಣೆಗೆ ಅನುಕೂಲವಾಗುವಂತೆ ಆರೋಗ್ಯ ರಕ್ಷಣಾ ಕಾರ್ಡ್ ನೀಡಲಾಗುತ್ತಿದೆ. ಈ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ರೂ.20 ಸಾವಿರದ ವರೆಗೆ ಆರೋಗ್ಯ ರಕ್ಷಣೆ ಸಿಗುತ್ತದೆ. ಪ್ರಸ್ತುತ 40 ಮಂದಿಗೆ ಈ ಕಾರ್ಡ್ ನೀಡಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಎಂ.ಲಕ್ಷ್ಮಣಗೌಡ, ಯೋಜನೆಯ ತಾಲ್ಲೂಕು ಘಟಕದ ನಿರ್ದೇಶಕ ಸುರೇಂದ್ರಗೌಡ ಇದ್ದರು.