ಶ್ರೀನಿವಾಸಪುರ: ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಲ್.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಪನಸಮಾಕನಹಳ್ಳಿಯಲ್ಲಿ ಅನುಗ್ರಹ ರೈತ ಉತ್ಪಾದಕರ ಕಂಪನಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರೈತ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಚೌದರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತಳೆದಿದೆ. ಜನ ಪ್ರತಿನಿಧಿಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ಗ್ರಾಮ ಸುತ್ತುವುದನ್ನು ಹೊರತುಪಡಿಸಿದರೆ ಮತ್ತೆ ಆ ಕಡೆ ಸುಳಿಯುವುದಿಲ್ಲ ಎಂದು ಆಪಾದಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ವೀರಭದ್ರಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ, ತೋಟಗಾರಿಕಾ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಮಾವಿನ ಬೆಳೆ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು.
ರೈತ ಮುಖಂಡ ಪ್ರಭಾಕರಗೌಡ, ತೋಟಗಾರಕಾ ಇಲಾಖೆ ಅಧಿಕಾರಿಗಳಾದ ಸುರೇಶ್, ಹರೀಶ್, ಪ್ರಶಾಂತ್, ಈಶ್ವರ್, ಹುಮಾಯೂನ್, ಮಂಜುಳ ಇದ್ದರು