ಶ್ರೀನಿವಾಸಪುರ: ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಿಭಟನ ನಿರತ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನಿಗದಿಪಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಹಗಲಿರಳು ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಕರ್ಯ ಕೊಡಬೇಕು. ಗ್ರಾಚ್ಯುಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು. ಮೂಲವೇತನ ಮತ್ತಿತರ ಸೌಲಭ್ಯ ನೀಡುವ ಕುರಿತು ಪರಿಶೀಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮಿತಿ ರಚಿಸಬೇಕು. ಏಕರೂಪ ಸೇವಾ ನಿಯಮ ರೂಪಿಸಬೇಕು ಎಂದು ಹೇಳಿದರು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಆರ್.ಆಂಜಲಮ್ಮ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಉತ್ತಮ ಗುಣಮಟ್ಟದ ಮೊಬೈಲ್ ಕೊಡಬೇಕು. ಪ್ರದೇಶಿಕ ಭಾಷೆಯಲ್ಲಿ ಪ್ರೋಗ್ರಾಂ ಅಳವಡಿಸಬೇಕು. ಪೋಷಣ್ ಅಭಿಯಾನಕ್ಕೆ ಆಧಾರ್ ಅಥವಾ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಅದೇಶ ಹಿಂಪಡೆಯಬೇಕು. ಆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗದರ್ಶನ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಿಪಿಒಗೆ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ನೀಡಲಾಯಿತು.
ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಜಿ.ಈಶ್ವರಮ್ಮ, ಕಾರ್ಯದರ್ಶಿ ಕೆ.ಎಸ್.ಮಮತ, ಖಜಾಂಚಿ ಕೆ.ಪಿ.ಪುಷ್ಪ ಇದ್ದರು.