ಶ್ರೀನಿವಾಸಪುರ: ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಮಾಡಿರುವ ಶೇ.40 ಕಮೀಷನ್ ಆಪಾದನೆ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪಣ್ಣ ಕಮೀಷನ್ ಆಪಾದನೆ ಮಾಡುವ ಮುನ್ನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸರ್ಕಾರ ಕಮೀಷನ್ ಪಡೆಯುತ್ತಿರುವುದು ನಿಜವೇ ಆಗಿದ್ದಲ್ಲಿ ದಾಖಲೆ ಸಹಿತ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಹೇಳಿದರು.
ಸಚಿವ ಮುನಿರತ್ನ ಅವರು ಈಚೆಗೆ ಕೋಲಾರದಲ್ಲಿ ಕಳಪೆ ಕಾಮಗಾರಿ ಪರಿಣಾಮವಾಗಿ ಹಾಳಾಗಿರುವ ರಸ್ತೆಗಳನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ರಸ್ತೆಗಳ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ರಸ್ತೆಗಳ ಕೋರ್ ಕಟ್ ಮಾಡಿ ಗುಣಮಟ್ಟ ಪರಿಶೀಲಿಸಲು ಕೈಗೊಂಡ ನಿರ್ಧಾರದಿಂದ ಹೆದರಿದ ಗುತ್ತಿಗೆದಾರರು, ಪ್ರತಿ ಪಕ್ಷದ ನಾಯಕರೊಂದಿಗೆ ಕೈಜೋಡಿಸಿ ಸರ್ಕಾರದ ವಿರುದ್ಧ ಆಧಾರವಿಲ್ಲದ ಆಪಾದನೆ ಮಾಡಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಜನಪರ ಯೋಜನೆಗಳು, ಜನರ ಮೆಚ್ಚುಗೆಗೆ ಪಾತ್ರವಾಗಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಾನುರಾಗಿ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆ ಸಹಿಸದ ಪ್ರತಿ ಪಕ್ಷಗಳು ವಿನಾಕಾರಣ ಟೀಕಿಸುವುದರಲ್ಲಿ ನಿರತವಾಗಿವೆ. ರಾಜೀವ್ ಗಾಂಧಿ ಅವರು, ಸರ್ಕಾರ ಬಿಡುಗಡೆ ಮಾಡುವ ಹಣದ ಪೈಕಿ ಶೇ.85 ರಷ್ಟು ಹಣ ಸೋರಿಕೆಯಾಗುತ್ತಿದೆ ಮತ್ತು ಶೇ.15 ರಷ್ಟು ಹಣ ಮಾತ್ರ ಅಭಿವೃದ್ಧಿ ಚಟುವಟಿಕೆಗೆ ಬಳಕೆಯಾಗುತ್ತಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಇದನ್ನು ಕಾಂಗ್ರೆಸ್ ಮುಖಂಡರು ಗಮನಿಸಬೇಕು ಎಂದು ಹೇಳಿದರು.
ಸೆ.8 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಜನೋತ್ಸವ ಆಚರಿಸಲಾಗುವುದು. ಉತ್ಸವದಲ್ಲಿ ಜಿಲ್ಲೆಯಿಂದ 50 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಕೃಷ್ಣಮೂರ್ತಿ, ಸುರೇಶ್ ನಾರಾಯಣ್ ಕುಟ್ಟಿ, ವೆಂಕಟೇಗೌಡ, ಬಾಲಾಜಿ, ನಾಗರಾಜ್, ಎಂ.ಲಕ್ಷ್ಮಣಗೌಡ, ಎಸ್.ವಿ.ಚಲಪತಿ, ಆರ್.ಎನ್.ಚಂದ್ರಶೇಖರ್, ವಿ.ನಿಶಾಂತ್, ಷಫಿವುಲ್ಲಾ, ರಾಮಾಂಜಿ, ರಮೇಶ್, ಜಯಣ್ಣ, ರೆಡ್ಡಪ್ಪ, ಬಂಗವಾದಿ ನಾಗರಾಜ್, ಸುರೇಶ್ ನಾಯಕ್ ಇದ್ದರು.