ಶ್ರೀವಾಸಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭದಲ್ಲಿ ಹಿರಿಯ ಛಾಯಾ ಗ್ರಾಹಕ ವಿಶ್ವನಾಥಸಿಂಗ್ ಹಾಗೂ ವೈದ್ಯಾಧಿಕಾರಿ ಡಾ.ಟಿ.ಎನ್.ಉಮಾಶಂಕರ್ ಅವರನ್ನು ಸನ್ಮಾನಿಸಲಾಯಿತು.
ಮೂಲಭೂತ ಹಕ್ಕುಗಳು ಅರಿವು ಅಗತ್ಯ
ಶ್ರೀನಿವಾಸಪುರ: ಸಮಾನತೆ ತತ್ವ ಸಾಕಾರಗೊಳ್ಳಲು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳ ಅರಿವು ಅಗತ್ಯ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ಸ್ಥಳೀಯ ವಕೀಲರ ಸಂಘದ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತ ಹಕ್ಕುಗಳ ಚಲಾವಣೆ ಸಂದರ್ಭದಲ್ಲಿ, ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಪ್ರತಿಯೊಬ್ಬರಿಗೂ ಹುಟ್ಟಿನಿಂದ ಸಾಯುವವರೆಗೆ ಬದುಕುವ ಹಕ್ಕಿದೆ. ಮಾನವ ಹಕ್ಕುಗಳ ಉಲಂಘನೆಯಾದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಳುವ ಹಕ್ಕಿದೆ. ಲಿಂಗ ತಾರತಮ್ಯ ಸೇರಿದಂತೆ ಯಾವುದೇ ತಾರತಮ್ಯಕ್ಕೆ ಅವಕಾಶ ಇರುವುದಿಲ್ಲ. ವ್ಯಕ್ತಿ ಹುಟ್ಟಿನಿಂದ ಸಾಯುವ ವರೆಗೆ ನ್ಯಾಯದ ನೆರಳಿನಲ್ಲಿ ಜೀವಿಸುತ್ತಾನೆ. ಅಗತ್ಯ ಇದ್ದಲ್ಲಿ ಉಚಿತ ಕಾನೂನು ನೆರವು ಪಡೆಯುವ ಸೌಲಭ್ಯ ಇದೆ ಎಂದು ಹೇಳಿದರು. ಹದಿಹರೆಯದವರು ಅಂಕೆ ಮೀರದೆ ಬದುಕು ಕಟ್ಟಿಕೊಳ್ಳಬೇಕು. ಕಾನೂನಿನ ಅಡಿಯಲ್ಲಿ ಬದುಕಲು ಬದ್ಧವಾಗಬೇಕು ಎಂದು ಹೇಳಿದರು.
ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ, ಸಂಸ್ಥೆ ವಿಶ್ವ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲೇ ಮಾನವ ಹಕ್ಕುಗಳ ಉಲಂಘನೆಯಾದರೂ, ಬಾಧಿತರ ರಕ್ಷಣೆಗೆ ಮುಂದಾಗುತ್ತದೆ. ಭ್ರಷ್ಟಾಚಾರ ಅತ್ಯಂತ ಅವಮಾನಕರ ಸಂಗತಿಯಾಗಿದೆ. ಬ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಟೊಂಕಕಟ್ಟಿ ನಿಲ್ಲಬೇಕು. ಕಾನೂನಿನ ಚೌಕಟ್ಟಿನಲ್ಲಿ ಬ್ರಷ್ಟಾಚಾರ ತಡೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಎಸ್.ಸಣ್ಣೀರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸುವ್ಯವಸ್ತೆ ಪಾಲನೆಯಾಗಲು ಕಾನೂನಿನ ಅರಿವು ಅಗತ್ಯ. ವಿದ್ಯಾವಂತ ಯುವ ಸಮುದಾಯ ಸಮಾಜದಲ್ಲಿ ಕಾನೂನು ಅರಿವು ಮೂಡಿಸಲು ಶ್ರಮಿಸಬೇಕು ಎಂದು ಹೇಳಿದರು.
ಈ ಸಂರ್ಭದಲ್ಲಿ ತಾಲ್ಲೂಕಿನ ಹಿರಿಯ ಛಾಯಾ ಗ್ರಾಹಕ ವಿಶ್ವನಾಥಸಿಂಗ್ ಹಾಗೂ ಪ್ರತಿಭಾವಂತ ವೈದ್ಯಾಧಿಕಾರಿ ಡಾ.ಟಿ.ಎನ್.ಉಮಾಶಂಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕರಾದ ಡಾ. ಶಾರದ, ಡಾ. ಮೃತ್ಯುಂಜಯ, ಡಾ.ನವೀನ್, ಡಾ.ದಿಲೀಪ್ ಇದ್ದರು.