ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಅಧ್ಯಯನದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವಿಶ್ವ ವಿದ್ಯಾರ್ಥಿಗಳ ದಿನಾಚರನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಆದರ್ಶ ಪಾಲಿಸಬೇಕು. ಹಿರಿಯರನ್ನು ಗೌರವ ಭಾವನೆಯಿಂದ ಕಾಣಬೇಕು. ಭಾರತದ ಸಾಂಸ್ಕøತಿಕ ಪರಂಪರೆಯನ್ನು ಎತ್ತಿ ಹಿಡಿಯಬೇಕು. ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕ ಓದುವುದರ ಕಡೆ ಗಮನ ನೀಡಬೇಕು. ಶಿಕ್ಷಣದಿಂದ ಮಾತ್ರ ಉತ್ತಮ ಜೀವನ ಮಾರ್ಗ ಸುಂದರವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೊಲೀಸ್ ಇನ್ಸ್ಪೆಕ್ಟರ್ ಸಿ.ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಶಿವಪ್ಪ ಶಿಕ್ಷಣದ ಮಹತ್ವ ಹಾಗೂ ಕಾನೂನು ಅರಿವಿನ ಅಗತ್ಯ ಕುರಿತು ಮಾತನಾಡಿದರು.
ವಕೀಲರ ಸಂಘದ ಕಾರ್ಯದರ್ಶಿ ಕೆ.ವಿ.ರೂಪ, ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ಸರ್ಕಾರಿ ಸಹಾಯಕ ಅಭಿಯೋಜಕ ಜಿ.ಮುಕುಂದ, ಪ್ರಾಂಶುಪಾಲ ಕೆ.ವಿ.ಮಂಜುನಾಥ್, ವಕೀಲರಾದ ಪಿ.ಸಿ.ನಾರಾಯಣಸ್ವಾಮಿ, ಅರ್ಜುನ್, ರಾಜಗೋಪಾಲರೆಡ್ಡಿ, ಈಶ್ವರ್ಗೌಡ, ನವೀನ್ ಕುಮಾರ್, ಮಂಜುನಾಥ್ ಇದ್ದರು.