ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಇಲ್ಲಿ ಏರ್ಪಡಿಸಿದ್ದ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ ಪಟ್ಟಣದಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ 15ನೇ ಹಣಕಾಸು ಯೋಜನೆಯ ಎರಡು ವಿಭಾಗಗಳಲ್ಲಿ ಕ್ರಮವಾಗಿ ರೂ.141 ಲಕ್ಷ ಹಾಗೂ ರೂ.110 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಸಭೆಯ ಸಮ್ಮತಿ ಕೇಳಲಾಯಿತು. ಈ ಬಗ್ಗೆ ಕೆಲವು ಸದಸ್ಯರು ಎತ್ತಿದ ಆಕ್ಷೇಪಣೆಗೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಉತ್ತರ ನೀಡಿದ ಬಳಿಕ ಸಭೆ ಸಮ್ಮತಿ ನೀಡಿತು.
ಪುರಸಭೆಗೆ ಸೇರಿದ 50 ಹಳೆ ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಿಸಲು, ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳಿಗೆ ಅವಕಾಶ ಕಲ್ಪಿಸಲು ಸಭೆ ಅನುಮೋದನೆ ನೀಡಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು, ಕೋವಿಡ್ ನಿಯಮ ಪಾಲಿಸಲು ಸದಸ್ಯರು ಸಹಕಾರ ನೀಡಬೇಕು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಸದಸ್ಯರಾದ ಬಿ.ವೆಂಕಟರೆಡ್ಡಿ, ಮುನಿರಾಜು ಮತ್ತಿತರರು ಸಭೆಯಲ್ಲಿ ಮಾತನಾಡಿ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಅಧಿಕಾರಿಗಳಾದ ಡಿ.ಶೇಖರ್ ರೆಡ್ಡಿ, ಪೃಥ್ವಿರಾಜ್, ನಾಗರಾಜ್, ಶಂಕರ್, ರಾಜೇಶ್ವರಿ, ನಾಗೇಶ್, ಸಂತೋಷ್ ಇದ್ದರು.