ಶ್ರೀನಿವಾಸಪುರ: ಪಟ್ಟಣದಲ್ಲಿ ಶನಿವಾರ ಅನಗತ್ಯವಾಗಿ ಓಡಾಡುವ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಶನಿವಾರ ಅನಗತ್ಯವಾಗಿ ಓಡಾಡುವ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿದರು. ನಿಗದಿತ ಸಮಯ ಮುಗಿದ ಬಳಿಕ ಪಟ್ಟಣದಲ್ಲಿಸಂಚರಿಸುತ್ತಿದ್ದ ಬೈಕ್ ಮತ್ತಿತರ ವಾಹನಗಳನ್ನು ತಡೆದು ಪ್ರಯಾಣದ ಕಾರಣ ಕೇಳಿ ಬಿಡುತ್ತಿದ್ದರು.
ಕೆಲವು ವಾಹನ ಚಾಲಕರು ತಾವು ಹೊಂದಿದ್ದ ಪಾಸ್ ತೋರಿಸಿ ಹೊರಟರೆ, ಪಾಸ್ ಇಲ್ಲದವರು ಶಿಸ್ತು ಕ್ರಮವನ್ನು ಎದುರಿಸಬೇಕಾಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ವಾಹನ ಸಂಚಾರ ವಿರಳವಾಗಿತ್ತು.
ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆಯೇ ಬಂದಿದ್ದ ಜನರು, ಖರೀದಿ ಬಳಿಕ ಹಿಂದಿರುಗಿದರು. ಪೊಲೀಸರು ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದ ಪ್ರಯುಕ್ತ ದ್ವಿಚಕ್ರ ವಾಹನಗಳು ರಸ್ತೆಗೆ ಇಳಿಯಲಿಲ್ಲ.
ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯ ನಾಗರಿಕರು ಮಾಸ್ಕ್ ಧರಿಸಿದ್ದುದು ಕಂಡುಬಂದಿತು. ಕೆಲವರು ಕರವಸ್ತ್ರ, ಟವಲ್, ಸೆರಗಿನಿಂದ ಬಾಯಿ, ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದರು. ಪೊಲೀಸರು ಅಂಥ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಮಾಸ್ಕ್ ಧರಿಸುವಂತೆ ತಿಳುವಳಿಕೆ ನೀಡಿದರು.
ಪಡಿತರ ಹೆಚ್ಚಿಸಲು ಮನವಿ: ಕೊರೊನಾ ಸಂಕಷ್ಟದ ನಡುವೆ ಬಡವರ ಜೀವನ ನಿರ್ವಹಿಸುವುದು ಕಷ್ಟವಾಗಿದ್ದು, ಸರ್ಕಾರ ಪಡಿತರ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಸರ್ಕಾರವನ್ನು ಕೋರಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ತಲಾ 7 ಕೆಜಿ ಅಕ್ಕಿ, 3 ಕೆಜಿ ಗೋದಿ, 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ತಲಾ 5 ಕೆಜಿ ಅಕ್ಕಿ ವಿತರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.
ಬದಲಾದ ಸಮಯ: ಕೊರೊನಾ ತಡೆ ದೃಷ್ಟಿಯಿಂದ ಗೊಬ್ಬರದ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ 12 ಗಂಟೆ ವರೆಗೆ ತೆರೆಯಲಾಗುವುದು. ಅಗತ್ಯ ಇರುವ ರೈತರು ನಿಗದಿತ ಸಮಯದೊಳಗೆ ಅಗತ್ಯವಾದ ಔಷಧಿ ಹಾಗೂ ಗೊಬ್ಬರವನ್ನು ಖರೀದಿಸಬೇಕು ಎಂದು ಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ಕೋಟೇಶ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಆಭರಣದ ಅಂಗಡಿಗಳನ್ನು ಬೆಳಿಗ್ಗೆ 9 ರಿಂದ 2 ಗಂಟೆ ವರೆಗೆ ತೆರೆಯಲಾಗುವುದು ಎಂದು ಆಭರಣ ಮಾರಾಟಗಾರರ ಸಂಘದ ಅಧ್ಯಕ್ಷ ಕೆ.ಆರ್.ಕೇದಾರ್‍ನಾಥ್ ತಿಳಿಸಿದ್ದಾರೆ
.