ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದಲ್ಲಿ ಜನ್ಮಭೂಮಿ ವೇದಿಕೆ ವತಿಯಿಂದ ಜೂ. 5 ರಂದು ಬೆಳಿಗ್ಗೆ 9 ರಿಂದ ಲೋಕ ಕಲ್ಯಾಣಾರ್ಥ ಸಿಂಹಾಚಲ ವರಾಹ ಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರ ಕಲ್ಯಾಣೋತ್ಸವವನ್ನು ಊರ ಹಬ್ಬದಂತೆ ಆಚರಿಸಲಾಗುವುದು. ಜೂ.3 ರಂದು ಸಂಜೆ 7 ಗಂಟೆಗೆ ಜಬರ್‍ದಸ್ತ್ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂ.4 ರಂದು ಪಟ್ಟಣದ ರಥಬೀದಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಹೇಳಿದು.
ಜೂ.5 ರಂದು ಸಂಜೆ 7 ಗಂಟೆಗೆ ಗಾಯಕಿ ಮಂಗ್ಲಿ ಅವರಿಂದ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂ.6 ರಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ದಾನವೀರ ಶೂರ ಕರ್ಣ ಎಂಬ ನಾಟಕ ಪ್ರದರ್ಶನ ಇರುತ್ತದೆ ಎಂದು ಹೇಳಿದರು.
ಜನ್ಮಭೂಮಿ ವೇದಿಕೆ ವತಿಯಿಂದ ಪ್ರತಿ ವರ್ಷ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು. ಕೊರೊನಾದಿಂದಾಗಿ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮತ್ತೆ ಹಿಂದಿನಂತೆಯೇ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ವೆಂಕಟರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ಗಂಗಾಧರ್, ಉನಿಕಿಲಿ ನಾಗರಾಜ್, ಜಾಮಚೆಟ್ಟು ಶ್ರೀನಿವಾಸರೆಡ್ಡಿ, ರಾಮಕೃಷ್ಣ, ವೆಂಕಟೇಶ್ ಇದ್ದರು.