ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿ ಎಲ್ಲ ಕಾರ್ಮಿಕರ ಶ್ರಮವಿದೆ ಅವರ ಸೇವೆಯನ್ನು ಗೌರವಿಸಬೇಕು :ಕೆ.ಕೆ.ಮಂಜುನಾಥರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿ ಎಲ್ಲ ಕಾರ್ಮಿಕರ ಶ್ರಮವಿದೆ. ಸರ್ಕಾರ ಹಾಗೂ ಸಮದಾಯ ಅವರ ಸೇವೆಯನ್ನು ಗೌರವಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಯಲ್ಲಪ್ಪ ಮಾತನಾಡಿ, ಕಾರ್ಮಿಕರು ಸರ್ಕಾರದ ಸೌಲಭ್ಯ ಪಡೆಯಲು ತಪ್ಪದೆ ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಬೇಕು. ಸಂಘದ ವತಿಯಿಂದ ನೀಡುವ ಗುರುತಿನ ಚೀಟಿ ಪಡೆದುಕೊಳ್ಳಬೇಕು. ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು 80 ಸಾವಿರ ಹಾಗೂ ತಾಲ್ಲೂಕಿನಲ್ಲಿ 13 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಸಮಾರಂಭದಲ್ಲಿ 150 ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ 100 ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸುರಕ್ಷತೆಗೆ ಪ್ರಥಮ ಆಧ್ಯತೆ ನೀಡಬೇಕು. ಒದಗಿಸಿರುವ ಸುರಕ್ಷತಾ ಸಲಕರಣೆಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ, ಗೌರವಾಧ್ಯಕ್ಷ ಕೃಷ್ಣಪ್ಪ, ಖಜಾಂಚಿ ವೆಂಕಟರಾಮರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಬಂಗವಾದಿ ನಾಗರಾಜು, ಸರಿತಮ್ಮ, ಸ್ವಾತಿ, ಗುರುಮೂರ್ತಿ, ಹೊಗಳಗೆರೆ ನಾಗರಾಜ್ ಇದ್ದರು.