ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕ ಡಾ. ರಂಗರಾವ್ ಅವರು ವೃದ್ಧೆಯೊಬ್ಬರ ಹೊಟ್ಟೆಯಲ್ಲಿ ಬೆಳೆದಿದ್ದ 7.2 ಕೆಜಿ ತೂಕದ ದುರ್ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.
ಪಟ್ಟಣದ ರತ್ನಮ್ಮ (82) ಹೊಟ್ಟೆ ನೋವಿನಿಂದ ನರಳುತ್ತಿದ್ದರು. ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ರಂಗರಾವ್, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರತ್ನಮ್ಮ ಅವರನ್ನು ಪರೀಕ್ಷಿಸಿದ ಬಳಿಕ ಹೊಟ್ಟೆಯಲ್ಲಿ ದುರ್ಮಾಂಸ ಬೆಳೆದಿರುವುದನ್ನು ಪತ್ತೆಹಚ್ಚಿದರು. ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅಗತ್ಯ ಕುರಿತು ತಿಳಿಸಿದರು. ಅದಕ್ಕೆ ಮನೆ ಮಂದಿ ಒಪ್ಪಿದರು.
ಶುಕ್ರವಾರ ಶಸ್ತ್ರ ಚಿಕಿತ್ಸೆ ಮಾಡಿ ಮಹಿಳೆಯನ್ನು ಬಾಧಿಸುತ್ತಿದ್ದ 7.2 ಕೆಜಿ ತೂಕದ ದುರ್ಮಾಂಸವನ್ನು ಹೊರಗೆ ತೆಗೆಯಲಾಯಿತು. ಮಹಿಳೆ ಈಗ ಹೊಟ್ಟೆ ನೋವಿನಿಂದ ಪಾರಾಗಿದ್ದಾರೆ.
ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್, ವೈದ್ಯರಾದ ಡಾ. ಉಮಾಶಂಕರ್, ಡಾ. ಸಂಗೀತಾ, ಸಿಬ್ಬಂದಿ ಕವಿತಾ, ಶ್ರೀರಾಮ್ ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ನೆರವಾದರು.
ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ರೋಗಿಯ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರು ಶಸ್ತ್ರ ಚಿಕಿತ್ಸಕ ಡಾ. ರಂಗರಾವ್ ಮತ್ತಿತರ ವೈದ್ಯರನ್ನು ಅಭಿನಂದಿಸಿದರು.