ಶ್ರೀನಿವಾಸಪುರ: ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿದ ಬಂದ್‍ಗೆ ತಾಲ್ಲೂಕಿನಲ್ಲಿ ಸ್ಪಂದನೆ ಕಂಡುಬರಲಿಲ್ಲ

ಶ್ರೀನಿವಾಸಪುರ: ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶುಕ್ರವಾರ ನೀಡಿದ್ದ ರಾಜ್ಯ ಬಂದ್‍ಗೆ ತಾಲ್ಲೂಕಿನಲ್ಲಿ ಸ್ಪಂದನೆ ಕಂಡುಬರಲಿಲ್ಲ.
ತಾಲ್ಲೂಕಿನಾದ್ಯಂತ ಸರ್ಕಾರಿ ಕಚೇರಿ, ಬ್ಯಾಂಕ್, ಶಾಲಾ ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಕೆಎಸ್‍ಆರ್‍ಟಿಸಿ ಬಸ್ ಹಾಗೂ ಆಟೋ ಸೇವೆ ಸಾಮಾನ್ಯವಾಗಿತ್ತು. ಅಂಗಡಿ ಮುಂಗಟ್ಟು ತೆರೆದಿತ್ತು. ಮಾರುಕಟ್ಟೆಗಳಲ್ಲಿ ಜನಸಂದಣಿ ಎಂದಿನಂತೆಯೇ ಇತ್ತು. ಖಾಸಗಿ ಬಸ್ ಮಾಲೀಕರ ಸಂಘ ಬಂದ್‍ಗೆ ಬೆಂಬಳ ಸೂಚಿಸಿದ್ದರಿಂದ ಖಾಸಗಿ ಬಸ್‍ಗಳ ಓಡಾಟ ಇರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಬಂದೊಬಸ್ತ್ ಮಾಡಲಾಗಿತ್ತು.
ಕರ್ನಾಟಕ ರಾಜ್ಯ ಜನಸ್ಪಂದನ ರಕ್ಷಣಾ ವೇದಿಕೆ ಮುಖಂಡರು ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಸರ್ಕಾರವನ್ನು ಆಗ್ರಹಿಸಿ ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ಮನವಿ ಪತ್ರ ನೀಡಿದರು.
ಕರ್ನಾಟಕ ಜನಸ್ಪಂದನ ರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಆರ್.ರಮೇಶ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಚಿರಂಜೀವಿ, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್.ಮಂಜುನಾಥ, ಮುಖಂಡರಾದ ಚಂದ್ರಪ್ಪ, ರವಿ, ಶ್ರೀರಾಮಪ್ಪ, ಮುನಿಯಪ್ಪ, ಶಿವಪ್ಪ, ಕೆ.ಮಂಜುನಾಥ್ ಇದ್ದರು