ಶ್ರೀನಿವಾಸಪುರ: ಅಧಿಕಾರಿಗಳು ಮುಂಗಾರು ಮಳೆ ಸೃಷ್ಟಿಸಬಹುದಾದ ಅವಾಂತರ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಅತಿವೃಷ್ಟಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಬೇಕು. ಸಂಭವನೀಯ ವಿಪತ್ತಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಬಿತ್ತನೆಗೆ ಅಗತ್ಯವಾದ ಎಲ್ಲ ಸೌಲಭ್ಯ ಒದಗಿಸಬೇಕು. ಜಾನುವಾರು ಮೇವು ಸಂಗ್ರಹ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಆಮ್ಲಜನಕ ಘಟಕ ಪುನರಾರಂಭ ಮಾಡಬೇಕು. ಪಟ್ಟಣದಲ್ಲಿ ರಾಜಕಾಲುವೆ ಹಾಗೂ ಚರಂಡಿ ಸ್ವಚ್ಛತೆ ಕೈಗೊಳ್ಳಬೇಕು. ಪುರಸಭೆಗೆ ಬಂದಿರುವ ರೂ.15 ಕೋಟಿ ಅನುದಾನ ಬಳಸಿಕೊಂಡು ನಿಯಮಾನುಸಾರ ಮೂಲ ಸೌಕರ್ಯ ಒದಗಿಸಬೇಕು. ಕೆಸಿ ವ್ಯಾಲಿ ಪೈಪ್ ಅಳವಡಿಸಲು ಅಗೆಯಲಾಗಿರುವ ರಸ್ತೆಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು. ಜಾಕೀರ್ ಹುಸೇನ್ ಮೊಹಲ್ಲಾದ ಕೊಳವೆ ಬಾವಿಗೆ ಪಂಪ್‍ಸೆಟ್ ಅಳವಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿ ಹೊಡೆತಕ್ಕೆ 2939 ಹೆಕ್ಟೇರ್‍ನಲ್ಲಿ ಬಂದಿದ್ದ ಮಾವಿನ ಫಸಲಿಗೆ ಧಕ್ಕೆಯಾಗಿದೆ. ಮೇ.27 ರಜಾ ದಿನವಾದರೂ ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಹೋಗಿ ಜಂಟಿ ಸಮೀಕ್ಷೆ ನಡೆಸಲಿದ್ದಾರೆ. ಜಾನುವಾರು ನಷ್ಟ ಹೊಂದಿರುವ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ಥರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ತುಂಬಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಪುಸಭೆ ವ್ಯವಸ್ಥಾಪಕ ನವೀನ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ವೇದಾಂತ್ ಶಾಸ್ತ್ರಿ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಬೈರಾರೆಡ್ಡಿ, ಕೃಷಿ ಅಧಿಕಾರಿ ಈಶ್ವರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಶ್ವನಾಥರೆಡ್ಡಿ ಮತ್ತಿತರರು ಇದ್ದರು.