ಶ್ರೀನಿವಾಸಪುರ: ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಜಾನುವಾರುಗಳ ಪಾಲಿಗೆ ಯಮಪಾಷವಾಗಿದೆ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಕವರ್‍ಗೆ ಬದಲಾಗಿ ಬಟ್ಟೆ ಚೀಲ ಬಳಸಬೇಕು. ಮಾಂಸ, ಮೀನು ಖರೀದಿಸಿ ಕೊಂಡೊಯ್ಯಲು ಸ್ಟೀಲ್ ಕ್ಯಾರಿಯರ್ ಬಳಸುವುದು ಕ್ಷೇಮಕರ. ಪ್ಲಾಸ್ಟಿಕ್ ವಸ್ತು ಸುಡುವುದರಿಂದ ಪರಿಸರ ಕೆಡುತ್ತದೆ. ವಾಯು ಮಾಲಿನ್ಯ ಹೆಚ್ಚಿ ಉಸಿರಾಟದ ತೊಂದರೆ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜನರು ಪ್ಲಾಸ್ಟಿಕ್ ಬಳಕೆ ವಿಷಯದಲ್ಲಿ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ ಮಾತನಾಡಿ, ಪುರಸಭೆ ಏನೆಲ್ಲ ಕ್ರಮ ಕೈಗೊಂಡರೂ, ಪ್ಲಾಸ್ಟಿಕ್ ವಸ್ತು ಮಾರಾಟ ಹಾಗೂ ಬಳಕೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಷೇಧಿತ ಪ್ಲಾಸ್ಟಿಕ್ ವಸ್ತುಳ ತಯಾರಿಕೆ ನಿಲ್ಲಿಸಲು ಸರ್ಕಾರ ಕೈಗೊಳ್ಳಬೇಕು. ಮೂಲದಲ್ಲಿಯೇ ತಡೆಯುವುದರಿಂದ ಬಳಕೆ ಸಂಪೂರ್ಣ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ಸುರೇಶ್, ಸಂತೋಷ್ ಇದ್ದರು.