ಶ್ರೀನಿವಾಸಪುರ: ಪಟ್ಟಣದ ವಕೀಲರು ಶುಕ್ರವಾರ, ಈಚೆಗೆ ನಡೆದ ಗುಲ್ಬರ್ಗ ವಕೀಲ ಈರಣ್ಣಗೌಡ ಪಾಟೀಲ್ ಅವರ ಹತ್ಯೆ ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನ್ಯಾಯಾಲಯದದಿಂದ ತಮ್ಮ ಬೇಡಿಕೆ ಒಳಗೊಂಡ ಫಲಕ ಹಿಡಿದು ಮೆರವಣಿಗೆ ಹೊರಟ ವಕೀಲರು, ಎಂಜಿ ರಸ್ತೆ ಮೂಲಕ ತಾಲ್ಲೂಕು ಕಚೇರಿಗೆ ತೆರಳಿ, ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಅವರಿಗೆ ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರ ಅರ್ಪಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಗುಲ್ಬರ್ಗದಲ್ಲಿ ಈಚೆಗೆ ಹಾಡು ಹಗಲೇ ಕರ್ತವ್ಯ ನಿರತ ವಕೀಲ ಈರಣ್ಣಗೌಡ ಪಾಟೀಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೃತ್ಯ ಖಂಡನೀಯವಾಗಿದೆ. ನೊಂದವರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಕೆಲಸ ಮಾಡುವ ವಕೀಲರಿಗೆ ರಕ್ಷಣೆ ಇಲ್ಲದಿರುವುದು ದುರದೃಷ್ಟಕರ. ಸರ್ಕಾರ ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಬೇಕು ಎಂದು ಆಗ್ರಹಪಡಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ ಮಾನಾಡಿ, ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಕಾನೂನಾತ್ಮ ಹೋರಾಟ ನಡೆಸುವ ವಕೀಲರ ಜೀವಕ್ಕೆ ರಕ್ಷಣೆ ಬೇಕಾಗಿದೆ. ಹಾಗಾಗಿ ಸರ್ಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಟಿ.ವಿ.ನಾರಾಯಣಸ್ವಾಮಿ, ಖಜಾಂಚಿ ಬಿ.ವೆಂಕಟೇಶ್, ಜಂಟಿ ಕಾರ್ಯದರ್ಶಿ ಸಿ.ಸೌಭಾಗ್ಯ, ಮಾಜಿ ಅಧ್ಯಕ್ಷ ಟಿ.ವೆಂಕಟೇಶ್, ರಾಜಗೋಪಾಲರೆಡ್ಡಿ, ವಕೀಲರಾದ ಶ್ರೀನಿವಾಸಗೌಡ, ಅರ್ಜುನ್, ವೆಂಕಟರವಣ, ವಿಜಯ್ ಕುಮಾರ್, ರೂಪ ಇದ್ದರು.