ಶ್ರೀನಿವಾಸಪುರ ಪುರಸಭೆ ಸರ್ವ ಸದಸ್ಯರ ಸಭೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗದೆ ಗೊಂದಲ

ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗದೆ ಗೊಂದಲ ಏರ್ಪಟ್ಟಿತ್ತು.
ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್ ಮತ್ತು ಆಡಳಿತ ಪಕ್ಷದ ಸದಸ್ಯರು ಬಂದಿರಲಿಲ್ಲ. ಆದರೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹಾಗೂ ವಿರೋಧ ಪಕ್ಷದ ಸದಸ್ಯರು ಹಾಜರಿದ್ದರು. ಸಮಯ 11.30 ತ್ತಾದರೂ ಆಡಳಿತ ಪಕ್ಷದ ಸದಸ್ಯರು ಬರಲಿಲ್ಲ. ಆದರೆ ಅನಾರೋಗ್ಯದಿಂದಾಗಿ ಸಭೆಯನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿರುವುದಾಗಿ ಅಧ್ಯಕ್ಷೆ ಮುಖ್ಯಾಧಿಕಾರಿ ಎಂ.ಜಯರಾಂ ಅವರ ಮೊಬೈಲ್‍ಗೆ ಸಂದೇಶ ಕಳುಹಿಸಿದರು.
ಇದರಿಂದ ಕೆಂಡಮಂಡಲವಾದ ವಿರೋಧ ಪಕ್ಷದ ಸದಸ್ಯರು ಸಭೆ ರದ್ದುಪಡಿಸುವಂತೆ ಮುಖ್ಯಾಧಿಕಾರಿ ಜಯರಾಂ ಅವರನ್ನು ಒತ್ತಾಯಿಸಿದರು. ಆದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದಾಗ ಎದ್ದು ಸಭೆಯಿಂದ ಹೊರ ನಡೆದರು.
ಮಧ್ಯಾಹ್ನದ ಹೊತ್ತಿಗೆ ಅಧ್ಯಕ್ಷಕರು ಆಡಳಿತ ಪಕ್ಷದ ಸದಸ್ಯರೊಂದಿಗೆ ಬಂದು ಆಸೀನರಾದರು. ಉಪಾಧ್ಯಕ್ಷರು ಹಾಗೂ ವಿರೋಧ ಪಕ್ಷದ ಸದಸ್ಯರು ಮತ್ತೆ ಸಭೆಗೆ ಬಂದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಸಿ ತಂದಿದ್ದ ರೂ.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪಟ್ಟಿ ಓದುತ್ತಿದಂತೆ, ರೂ.3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಈಜುಕೊಳ ಕಾಮಗಾರಿಗೆ ವಿರೋಧ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.
ಆದರೆ ಆಡಳಿತ ಪಕ್ಷದ ಸದಸ್ಯರು ಆಗಲೇ ಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಎರಡೂ ಕಡೆಯ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೈ ಕೈ ಮಿಲಾಯಿಸುವ ಹಂತ ಮುಟ್ಟಿತು. ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲು ಒಪ್ಪಿಗೆ ಸೂಚಿಸಿ ಸಭೆಯಿಂದ ಎದ್ದು ಹೊರನಡೆದರು. ಪೊಲೀಸರು ಮಧ್ಯ ಪ್ರವೇಶಿಸಿಸಿ, ಸದಸ್ಯರನ್ನು ಹೊರಗೆ ಕಳುಹಿಸಿದರು.
ಸದಸ್ಯರಾದ ಬಿ.ವಿ.ರೆಡ್ಡಿ, ಮುನಿರಾಜು, ಜಯಣ್ಣ, ರೆಡ್ಡಪ್ಪ, ಶೇಕ್ ಷಫಿವುಲ್ಲಾ, ರಮೇಶ್, ರಸೂಲ್ ಖಾನ್, ಆನಂದ್, ಭಾಸ್ಕರ್, ಸಂಜಯ್ ಸಿಂಗ್, ಅನೀಸ್ ಅಹ್ಮದ್, ತಜ್‍ಮಲ್, ನಾಗರಾಜ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಂದಾಯ ನಿರೀಕ್ಷಕರಾದ ಶಂಕರ್, ವಿ.ನಾಗರಾಜ್, ಶಾಸ್ತ್ರಿ ಮತ್ತಿತರರು ಇದ್ದರು.