ಶ್ರೀನಿವಾಸಪುರ: ಇಲ್ಲಿ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪುರಸಭಾ ಸದಸ್ಯರ ವಿಶೇಷ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಪುರಸಭಾ ಕಚೇರಿ ಸ್ವಚ್ಛತೆ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಚಾಲಕರು, ಕಾವರಲುಗಾರರು, ಆಪರೇಟರ್‍ಗಳು, ಸೂಪರ್‍ವೈಸರ್‍ಗಳು, ಜೆಸಿಬಿ, ಸಕ್ಕಿಂಗ್, ಜಟ್ಟಿಂಗ್ ಯಂತ್ರ, ಟ್ರ್ಯಾಕ್ಟರ್, ಆಟೋ ಟಿಪ್ಪರ್ ವಾಹನಗಳ ಕಾರ್ಮಿಕರು ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಮಂದಿ ಡಾಟಾ ಎಂಟ್ರಿ ಆಪರೇಟರ್‍ಗಳ ಸೇವೆಯನ್ನು ಡಿ.22 ರಿಂದ ಪೂರ್ವಾನ್ವಯವಾಗುವಂತೆ ಮುಂದುವರಿಸಿ, ಟೆಂಡರ್ ಕರೆಯಲು ಒಪ್ಪಿಗೆ ನೀಡಲಾಯಿತು.
ಪಟ್ಟಣದ ಜೆಸಿ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಶಿಥಿಲಗೊಂಡಿರುವ ಪುರಸಭೆಗೆ ಸೇರಿದ 16 ವಾಣಿಜ್ಯ ಮಳಿಗೆ ಹಾಗೂ ದಕ್ಷಿಣ ಭಾಗದ 10 ಅಂಗಡಿ ತೆರವುಗೊಳಿಸಲು ಸಮ್ಮತಿ ಸೂಚಿಸಲಾಯಿತು.
ಪುರಸಭೆ ನೂತನ ಕಚೇರಿ ದಕ್ಷಿಣ ಭಾಗದ ಕಾಂಪೌಂಡ್ ಪಕ್ಕದಲ್ಲಿ ನಿರ್ಮಿಸಲಾಗಿರುವ ಕಾಲುವೆಗೆ ಸಂಬಂಧಿಸಿದ ಬಿಲ್ ಪಾವತಿಸು ವಿಚಾರ ಮುಂದೂಡಲಾಯಿತು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚು ಚರ್ಚೆ ಇಲ್ಲದೆ ಎರಡು ವಿಷಯಗಳಿಗೆ ಸಮ್ಮತಿ ಸೂಚಿಸಲಾಯಿತು. ಒಂದು ವಿಷಯವನ್ನು ಮುಂದೂಡಲಾಯಿತು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ಎಂ.ಜಯರಾಂ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕರಾದ ಶಂಕರ್, ಫಾತಿಮಾ ಬೇಗಂ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.