ಶ್ರೀನಿವಾಸಪುರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಲೋಕೋಪಯೋಗಿ ಇಲಾಖೆಯಿಂದ ಎಸ್ಎಫ್ಸಿ ವಿಶೇಷ ಅನುದಾನದಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಹೊಸದಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿರುವ ಎಚ್.ನಲ್ಲಪ್ಪಲ್ಲಿ, ಉನಿಕಿಲಿ, ಕೊಳ್ಳೂರು ಹಾಗೂ ಬೈರಪ್ಪಲ್ಲಿ ಹೊಸ ಬಡಾವಣೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಈಗಾಗಲೆ ಪುರಸಭೆ ಹೊಸ ಬಡಾವಣೆಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಸರ್ಕಾರದಿಂದ ರೂ.15 ಕೋಟಿ ಬಿಡುಗಡೆಯಾಗಿದೆ. ಒಟ್ಟು ರೂ.25 ಕೋಟಿ ವೆಚ್ಚದಲ್ಲಿ ಪುರಸಭೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈಗ ಎಸ್ಎಫ್ಸಿ ವಿಶೇಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು. ಕಾಮಗಾರಿ ಕೈಗೊಳ್ಳುವ ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎನ್.ನಾರಾಯಣಸ್ವಾಮಿ, ಎಂಜಿನಿಯರ್ಗಳಾದ ಎಲ್.ಎಂ.ನಾಗರಾಜ್, ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಜೂನಿಯರ್ ಎಂಜಿನಿಯರ್ ವಿ.ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.