ಶ್ರೀನಿವಾಸಪುರ : ಪಟ್ಟಣದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮನೆ ನಿರ್ಮಾಣಕ್ಕೆ ಅಗತ್ಯವಾದ ಜಮೀನು ಗುರುತಿಸಲಾಗಿದ್ದು, ಆದಷ್ಟು ಬೇಗ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪುರಸಭಾಧ್ಯಕ್ಷ ಬಿ.ಎಸ್.ಭಾಸ್ಕರ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುವ ಪೌರಕಾರ್ಮಿಕರು ನಿಜವಾಗಿಯೂ ಪಟ್ಟಣದ ಪ್ರಥಮ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು.
ಪೌರಕಾರ್ಮಿಕರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಗುವುದು. ಅವರಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಲಾಗುವುದು. ಏನಾದರೂ ಸಮಸ್ಯೆ ಎದುರಾದಲ್ಲಿ ಮಧ್ಯವರ್ತಿಗಳನ್ನು ಅವಲಂಬಿಸದೆ ನೇರವಾಗಿ ನನಗೆ ತಿಳಿಸಿ, ಸಾಧ್ಯವಾದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದು.
ಪಟ್ಟಣವನ್ನು ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸಲು ಕೈಗೊಂಡ ಕ್ರಮ ಫಲ ನೀಡಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆಯಲ್ಲಿ ಶೇ.೭೫ ರಷ್ಟು ಇಳಿಕೆಯಾಗಿದೆ. ನಾಗರಿಕರು ಹಾಗೂ ಪತ್ರಕರ್ತರು ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಸಹಕರಿಸಬೇಕು. ಯಾವುದೇ ಅಂಗಡಿಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತಿತರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಪುರಸಭೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪೌರಕಾರ್ಮಿಕರು ಹಾಗೂ ಕಚೇರಿ ಸಿಬ್ಬಂದಿಯನ್ನು ಸನ್ಮಾನಿಸಿ ನೆನಪಿನ ಕಾಣಿಕೆ ಹಾಗೂ ಉಡುಗೊರೆ ನೀಡಲಾಯಿತು. ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಪೌರಕಾರ್ಮಿಕರಿಗೆ ಪಾರಿತೋಷಕ ಹಾಗೂ ಬಹುಮಾನ ವಿತರಿಸಲಾಯಿತು.
ಪೌರಕಾರ್ಮಿಕರ ಕಲಾ ಮಂಡಳಿ ಕಲಾವಿದರು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಪುರಸಭೆಯ ಉಪಾಧ್ಯಕ್ಷೆ ಕೆ.ಎಸ್.ಸುನಿತಾ, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಹಿರಿಯ ಆರೋಗ್ಯಾಧಿಕಾರಿ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ನಾಗೇಶ್, ಸಂತೋಷ್, ಸುರೇಶ್, ಶಿವಪ್ರಸಾದ್, ಗೌತಮ್, ಚೆಂದು, ಮಂಜುನಾಥ್, ವೆಂಕಟೇಶಯ್ಯ, ಶಾರದ, ಭಾಗ್ಯಮ್ಮ, ಬೈರೆಡ್ಡಿ, ಸೀತಾರಾಮರೆಡ್ಡಿ, ವೇದಾಂತ್ ಶಾಸ್ತಿ ಮತ್ತು ಸದಸ್ಯರಿದ್ದರು.