

ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಧನ್ವಂತರಿ, ಗಣಪತಿ ಹಾಗೂ ಆಂಜನೇಯ ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಸಂಭ್ರಮದೊಂದಿಗೆ ಜರುಗಿತು. ಪುರೋಹಿತರಾದ ಎಚ್.ಎನ್. ರಾಮೋಜಿಚಾರ್ ಮತ್ತು ಹರೀಶ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿ ವಿಧಾನಗಳಂತೆ ಪ್ರತಿಷ್ಠಾಪನಾ ಕೈಂಕರ್ಯ ನೆರವೇರಿತು.
ಈ ದೈವಿಕ ಕಾರ್ಯಕ್ರಮದ ಭಾಗವಾಗಿ ವೈದ್ಯರು ಹಾಗೂ ಸಿಬ್ಬಂದಿ ದೇವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಪ್ರತಿಷ್ಠಾಪನೆಗೆ ಶ್ರಮಿಸಿದ ಆಸ್ಪತ್ರೆಯ ಸಿಬ್ಬಂದಿಗೆ ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷರಾದ ಕೆ. ಮೋಹನಚಾರಿ ಅವರು ಅಭಿನಂದನೆ ಸಲ್ಲಿಸಿದರು.
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಎಸ್. ಶ್ರೀನಿವಾಸ್ ಅವರೊಂದಿಗೆ ಡಾ. ರಂಗರಾವ್, ಡಾ. ನಿರಂಜನ್, ಡಾ. ಉಮಾಶಂಕರ, ಡಾ. ದಿವಾಕರ್, ಡಾ. ಸುರೇಶ್, ಡಾ. ಸಂಗೀತಾ, ಡಾ. ಸುಶ್ಮಿತಾ, ಡಾ. ದೀಪ್ ಹಾಗೂ ಸಿಬ್ಬಂದಿಯ ಪ್ರಮೀಳಾ, ಶಂಕರ, ಶ್ರೀರಾಮ್, ಔಷಧಿಕಾರ ಮೊಹಮ್ಮದ್ ಅಲಿ, ವರ್ಮನ್, ರವಿ, ಶಿವು, ನವೀನ್, ಕವಿತಾ, ಉಮಾ, ಅನಿತಾ, ಕಲ್ಲೇಶ್ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡರು.
ಈ ಕಾರ್ಯಕ್ರಮದಿಂದ ಆಸ್ಪತ್ರೆಯ ಆವರಣದಲ್ಲಿ ಭಕ್ತಿಯ ಪರಿಮಳ ಹರಡಿದಂತೆ ಪವಿತ್ರ ವಾತಾವರಣ ಮೂಡಿತ್ತು.
