ಶ್ರೀನಿವಾಸಪುರ: ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಅವರ ಕೊಲೆ ಖಂಡಿಸಿ ಪಟ್ಟಣದಲ್ಲಿ ಸಂಪೂರ್ಣ ಶಾಂತಿಯುತ ಬಂದ್ ಆಚರಿಸಲಾಯಿತು.
ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಚಿತ್ರ ಮಂದಿರ, ತರಕಾರಿ ಮಾರುಕಟ್ಟೆ ಮುಚ್ಚಲ್ಪಟ್ಟಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ಗಳು ಜನರಿಲ್ಲದೆ ಬಣಗುಡುತ್ತಿದ್ದವು. ಪಟ್ಟಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ಬಸ್ ನಿಲ್ದಾಣ ಬಸ್ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಪ್ರಯಾಣಿಕರು ಬಸ್ಗಾಗಿ ಕಾದು ಬಸವಳಿದರು. ಪಟ್ಟಣದ ಹೊರವಲಯದಲ್ಲಿ ಬಸ್ನಿಂದ ಇಳಿದ ಪ್ರಯಾಣಿಕರು ಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಂದ್ ಸಂದರ್ಭದಲ್ಲಿ ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಪಟ್ಟಣದ ಮುಖ್ಯ ರಸ್ತೆಗಳಲ್ಲಿ, ಈಚೆಗೆ ಕೊಲೆಯಾದ ಎಂ.ಶ್ರೀನಿವಾಸನ್ ಅವರ ಭಾವಚಿತ್ರ ಮೆರವಣಿಗೆ ನಡೆಸಿದರು.
ಮುಖಂಡರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ತಹಶೀಲ್ದಾರ್ ಶಿರಿನ್ ತಾಜ್ ಅವರಿಗೆ ನೀಡಿದರು. ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಪ್ರಕರಣವನ್ನ ಸಿಒಡಿಗೆ ಒಪ್ಪಿಸಬೇಕು. ಕೊಲೆ ಹಿಂದೆ ಇರಬಹುದಾದ ಕಾಣದ ಕೈಗಳ ಕೈವಾಡ ಬಯಲಿಗೆಳೆಯಬೇಕು ಎಂದು ಮನವಿ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಹೆಚ್ಚಿನ ತನಿಖೆಗೆ ಆಗ್ರಹ: ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶ್ರೀನಿವಾಸನ್ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪೊಲೀಸ್ ವಶದಲ್ಲಿರುವ ಆರೋಪಿಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸಿರುವ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್ ಮತ್ತು ಶ್ರೀನಿವಾಸನ್ ಮಧ್ಯೆ ಸಣ್ಣ ಪುಟ್ಟ ವಿಷಗಳಿಗೆ ಜಗಳವಾಗುತ್ತಿತ್ತು. ರಾಜಿಯೂ ಆಗುತ್ತಿತ್ತು. ಆದರೆ ಆರೋಪಿಗೆ ಕೊಲೆ ಮಾಡುವಷ್ಟು ಸಾಮಥ್ರ್ಯ ಇರುವ ಬಗ್ಗೆ ಅನುಮಾನವಿದೆ. ಹಾಡು ಹಗಲೇ ನಡೆದಿರುವ ಕೊಲೆ ಹಿಂದೆ ಕಾಣದ ಕೈಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿರುವುದರಿಂದ, ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹೇಳಿದರು.
ಮುಖಂಡರಾದ ಎನ್.ತಿಮ್ಮಯ್ಯ, ಬಿ.ಎಲ್.ಪ್ರಕಾಶ್, ಸತ್ಯನಾರಾಯಣ, ಕೆ.ಕೆ.ಮಂಜು, ಈರಪ್ಪ, ವರ್ತನಹಳ್ಳಿ ವೆಂಕಟೇಶ್, ಶ್ರೀನಿವಾಸ್, ಮುನಿವೆಂಕಟಪ್ಪ, ರಾಮಾಂಜಮ್ಮ, ನಾರಾಯಣಸ್ವಾಮಿ ಮತ್ತಿತರರು ಇದ್ದರು.