ಶ್ರೀನಿವಾಸಪುರ : ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಕೈಜೋಡಿಸಿ, ಸಲಹೆ, ಸಹಕಾರ ನೀಡಬೇಕು ಎಂದು ಗ್ರಾ.ಪಂ .ಅಧ್ಯಕ್ಷ ಸಿ.ಎಸ್.ಶ್ರೀನಿವಾಸ್ ಸದಸ್ಯರನ್ನ ಮನವಿ ಮಾಡಿದರು.
ತಾಲೂಕಿನ ಕಸಬಾ ಹೋಬಳಿಯ ಚಲ್ದಿಗಾನಹಳ್ಳಿ ಗ್ರಾಮದಲ್ಲಿನ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರಿಗೂ ಸಮಪಾಲುನೊಂದಿಗೆ ಅನುದಾನಗಳನ್ನು ಹಂಚಿಕೆ ಮಾಡಲಾಗುವುದು. ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳು, ಚರಂಡಿಗಳ ನಿರ್ಮಾಣ, ಸ್ವಚ್ಚತೆ, ವಸತಿಯೋಜನೆಗಳಿಗೆ ಸಂಬಂದಿಸಿದಂತೆ ಗ್ರಾಮಪಂಚಾಯಿತಿಗೆ ಬರುವ ಅನುದಾನಗಳನ್ನು ಪಂಚಾಯಿತಿ ಅಭಿವೃದ್ಧಿಗಾಗಿ ಬಳಸಲು ಸಲಹೆ ನೀಡಿದರಲ್ಲದೆ, ಪಂಚಾಯಿತಿ ಅಭಿವೃದ್ಧಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಬ್ಬಟ ಹಾಗು ಶಿವಪುರ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇದೆ. ಗ್ರಾಮಪಂಚಾಯಿತಿ ವ್ಯಾಪ್ತಿಯ 205 , 206 ರಲ್ಲಿ ಗ್ರಾಮಪಂಚಾಯಿತಿ ನೂತನ ಕಟ್ಟಡವನ್ನು ನಿರ್ಮಿಸಲು ಹಾಗು ಪಂಚಾಯಿತಿಗೆ ಸಂಬಂದಿಸಿದಂತೆ ವಾರದ ಸಂತೆಯನ್ನು ಶಿವಪುರ ಕ್ರಾಸ್ನ ಸರ್ವೆ ನಂಬರ್ 198 ರಲ್ಲಿ ಮಾಡಲು ಸರ್ವಸದಸ್ಯರು ಒಪ್ಪಿಗೆ ನೀಡಿದರು. ಮುಂದಿನ ಸಾಮಾನ್ಯ ಸಭೆಯಲ್ಲಿ ವಾರದ ಸಂತೆ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದರು.
ಪಿಡಿಒ ಕೆ.ಜಗದೀಶ್ಕುಮಾರ್ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ಆನಂದ್ಕುಮಾರ್, ಗಿರಿಯಪ್ಪ, ವೆಂಕಟರೆಡ್ಡಿ, ಗ್ರಾ.ಪಂ ಕಾರ್ಯದರ್ಶಿ ಶಿವಣ್ಣ, ಎಫ್ಡಿಎ ನಾರಾಯಣಸ್ವಾಮಿ ಇದ್ದರು.